ಅಳಿಕೆ ಕಲಾರಾಧಕರಾದ ಕಲಾವಿದರು: ದೇವಕಾನ ಕೃಷ್ಣ ಭಟ್
ಮಂಗಳೂರು, ಡಿ. 3: ಯಕ್ಷಗಾನ ರಂಗದಲ್ಲಿ ವೈಯಕ್ತಿಕ ಸಾಧನೆಯಿಂದ ಕಲಾವಿದರು ಕಲೆಯನ್ನೊಂದು ವೃತ್ತಿಯಾಗಿಸಿ ಬೆಳೆಯುತ್ತಾರೆ. ಅದು ಅವರಿಗೆ ಜೀವನೋಪಾಯ. ಆದರೆ ದಿ.ಅಳಿಕೆ ರಾಮಯ್ಯ ರೈಯವರು ಯಕ್ಷಗಾನ ಕಲೆಯನ್ನು ಆರಾಧಿಸುತ್ತಾ ಆ ಕಲೆಯೊಂದಿಗೆ ತಾನು ಬೆಳೆದು ಇಂದು ಪ್ರಾತ ಸ್ಮರಣೀಯರೆನಿಸಿದ್ದಾರೆ ಎಂದು ಪೈವಳಿಕೆ ಗಣೇಶ ಕಲಾವೃಂದದ ಸಂಚಾಲಕ ಹಾಗೂ ಹಿರಿಯ ಕಲಾವಿದ ದೇವಕಾನ ಕೃಷ್ಣ ಭಟ್ ಹೇಳಿದರು.
ಹಿರಿಯ ಯಕ್ಷಗಾನ ಮತ್ತು ಪ್ರಸಾಧನ ಕಲಾವಿದ ಜೋಡುಕಲ್ಲು ಆನಂದ ಪುರುಷ ಅವರಿಗೆ ದಿ.ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ 'ಅಳಿಕೆ ಸಹಾಯ ನಿಧಿ 'ವಿತರಿಸಿದ ಸಂದರ್ಭದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ಅನಾರೋಗ್ಯ ಪೀಡಿತರಾದ ಆನಂದ ಪುರುಷ ಅವರ ಬಾಯಾರಿನ ಮನೆಗೆ ಭೇಟಿ ನೀಡಿದ ಟ್ರಸ್ಟ್ ನ ಸದಸ್ಯರು ಪತ್ನಿ ಕಲ್ಯಾಣಿಯವರೊಂದಿಗೆ ಅವರನ್ನು ಸಮ್ಮಾನಿಸಿ ಯಕ್ಷನಿಧಿ ಸಮರ್ಪಿಸಿದರು. ಟ್ರಸ್ಟ್ ನ ಪ್ರಧಾನ ಸಲಹೆಗಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ವಂದಿಸಿದರು. ಅಳಿಕೆ ಬಾಲಕೃಷ್ಣ ರೈ, ಮಹಾಬಲ ರೈ ಬಜನಿ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಕಲಾವಿದರ ಮನೆಯವರು ಉಪಸ್ಥಿತರಿದ್ದರು.