×
Ad

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಆಗ್ರಹಿಸಿ ಡಿವೈಎಫ್‌ಐ ಧರಣಿ

Update: 2017-12-04 12:37 IST

ಮಂಗಳೂರು, ಡಿ.4: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು ಹಾಗೂ ದ.ಕ. ಕನ್ನಡ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗೆ ಇಂದು ಮನವಿ ಸಲ್ಲಿಸಲಾಯಿತು.

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ವತಿಯಿಂದ ಆಯೋಜಿಸಲಾದ ಧರಣಿಯ ಬಳಿಕ ಜಿಲ್ಲಾಧಿಕಾರಿ ಮೂಲಕ ಮನವಿ ನೀಡಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಖಾಸಗಿ ಆಸ್ಪತ್ರೆಗಳ ದುಬಾರಿ ದರಗಳಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ ಎಂದರು.

ಖಾಸಗೀಕರಣ, ಉದಾರೀಕರಣ ನೀತಿಯಿಂದಾಗಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವನ್ನು ಸರಕಾರ ಅನುತ್ಪಾದಕ ಕ್ಷೇತ್ರವೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಎರಡೂ ಕ್ಷೇತ್ರಗಳಿಗೆ ಸೂಕ್ತ ಅನುದಾನದ ಕೊರತೆಯಿಂದ ಸಾರ್ವಜನಿಕ ವಲಯದ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳ ಕೊರತೆಯನ್ನು ಎದುರಿಸಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಈ ವ್ಯವಸ್ಥೆಯ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಂದ ಬೇಕಾಬಿಟ್ಟಿಯಾಗಿ ವಿವಿಧ ಚಿಕಿತ್ಸೆ ನೆಪದಲ್ಲಿ ದುಬಾರಿ ಹಣವನ್ನು ಪಡೆಯುತ್ತಿವೆ ಎಂದು ಅವರು ಆರೋಪಿಸಿದರು.

ಸರಕಾರ ಇತ್ತೀಚೆಗೆ ಜಾರಿಗೆ ತರಲುದ್ದೇಶಿಸಿದ್ದ ಕೆಪಿಎಂಇ ಕಾಯ್ದೆಯಲ್ಲಿ ಅಗತ್ಯವಾದ ಮಾನದಂಡವನ್ನೇ ವೈದ್ಯರ ಒತ್ತಾಯಕ್ಕೆ ಮಣಿದು ಕೈಬಿಡಲಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ವೈದ್ಯರು ಮಾನವೀಯತೆಯ ಪ್ರತೀಕವಾಗಬೇಕೇ ಹೊರತು ರಾಕ್ಷಸರಾಗಬಾರದು. ಬಿಲ್ ಕಟ್ಟದಿದ್ದರೆ ಮೃತದೇಹ ನೀಡದೆ ಸತಾಯಿಸುವುದು, ಸಣ್ಣಪುಟ್ಟ ರೋಗಗಳ ಚಿಕಿತ್ಸೆಗೆ ಲಕ್ಷಾಂತರ ರೂ. ಶುಲ್ಕ ಪಡೆಯುವ ಪ್ರಸಂಗಗಳು ಖಾಸಗಿ ಆಸ್ಪತ್ರೆಗಳಿಂದ ನಡೆಯುತ್ತಿವೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವ ಅಗತ್ಯವಿದೆ. ಸರಕಾರ ಎಚ್ಚೆತ್ತುಕೊಂಡು ಜನಪರ ಯೋಜನೆಗಳನ್ನು ರೂಪಿಸುವ ಕಾರ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿದರು. ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಧುರಿ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News