ಯೆನೆಪೊಯ ಕಾಲೇಜಿನಲ್ಲಿ ವಿಚಾರ ಸಂಕಿರಣ
ಮಂಗಳೂರು, ಡಿ.4: ನಗರದ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈಯನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜ್ ವತಿಯಿಂದ ‘ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)’ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ವಾತಿಕ ಪೈ ಮಾತನಾಡಿ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟುಗಳು ಪೈಪೋಟಿಗಳಿಂದ ನಡೆಯುತ್ತಿದೆ. ಅದಕ್ಕೆ ಪೂರಕವಾಗಿರುವ ಸೇವಾ ತೆರಿಗೆಯ ಬಗ್ಗೆ ಕಾಲೇಜಿನಲ್ಲಿ ವಿಚಾರ ಸಂಕಿರಣ ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ವೃತ್ತಿಪರರಿಗೆ ಮಾಹಿತಿ ಪಡೆಯುವ ಅವಕಾಶ ಮಾಡಿರುವುದು ಶ್ಲಾಘನೀಯ ಎಂದರು.
ಯೆನೆಪೊಯ ವಿವಿಯ ಹಣಕಾಸು ಅಧಿಕಾರಿ ಮುಹಮ್ಮದ್ ಬಾವಾ, ಮಂಗಳೂರು ವಿವಿ ಎಂ.ಬಿ.ಎ. ವಿಭಾಗದ ಅಧ್ಯಕ್ಷ ಪ್ರೊ.ಟಿ.ಮಲ್ಲಿಕಾರ್ಜುನಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು. ಸಿ.ಎ. ನಂದಗೊಪಾಲ್, ಸಿ.ಎ. ಕೇಶವ ಎನ್. ಬಲ್ಲಕುರಾಯ, ಸಂತ ಅಲೋಶಿಯಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ನೊರ್ಬರ್ಟ್ ಲೋಬೊ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಜೊಬಿ ಇ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದ ಸಂಚಾಲಕ ಮುಹಮ್ಮದ್ ಶಾದ್ ಉಪಸ್ಥಿತರಿದ್ದರು. ಉಪನ್ಯಾಸಕಿ ಚೈತ್ರಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ನೀಕ್ಷಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.