ಬೆಳ್ತಂಗಡಿ: ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ)ವತಿಯಿಂದ ಪ್ರತಿಭಟನೆ
ಬೆಳ್ತಂಗಡಿ, ಡಿ. 4: ಸಂವಿಧಾನ ವಿರೋಧ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ವಿರೋಧ ಹೇಳಿಕೆಯನ್ನು ನೀಡಿದ ಉಡುಪಿಯ ಪೇಜಾವರ ಶ್ರೀ ಹಾಗೂ ಮಾಜಿ ಎಂಎಲ್‌ಸಿ ಗೋ. ಮಧುಸೂಧನ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿ ಮೂರು ಮಾರ್ಗದ ಬಳಿ ಪ್ರತಿಭಟನೆ, ರಸ್ತೆ ತಡೆ ನಡೆಸಿ ಹಾಗೂ ಪ್ರತಿಕೃತಿ ದಹನ ಮಾಡಿದರು.
ದಸಸಂ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂಚಾಲಕ ಚಂದು ಎಲ್. ಮಾತನಾಡಿ ಅಂಬೇಡ್ಕರ್ ಅವರು ಬರೆದ ಸಂವಿಧಾನ ನಾಡಿನ ಎಲ್ಲಾ ಸಮುದಾಯಕ್ಕೂ ಸರಿಯಾದ ನ್ಯಾಯ ನೀಡಿಲ್ಲ. ಅದನ್ನು ಒಪ್ಪಲು ಸಾಧ್ಯವಿಲ್ಲ. ಅದರ ಬದಲಾವಣೆ ಅಗತ್ಯ ಇದೆ ಎಂದು ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ಹೇಳಿಕೆ ನೀಡಿದ್ದರು. ದೇಶದ ಸಂವಿಧಾನ ಒಬ್ಬರೇ ಬರೆದಿಲ್ಲ ಎಂದು ಇನ್ನೊಂದು ಹೇಳಿಕೆ ನೀಡಿದ್ದರು. ಈ ಎರಡು ಹೇಳಿಕೆಗಳು ಸಂವಿಧಾನ ಹಾಗೂ ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವಾಗಿದೆ. ಮಾಜಿ ಎಂಎಲ್‌ಸಿ ಮಧುಸೂದನ್ ಅವರೂ ಕೂಡ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದರು. ಈ ಎಲ್ಲಾ ಹೇಳಿಕೆಗಳನ್ನು ನೀಡಿರು ವುದು ಖಂಡನೀಯವಾದದ್ದು ಎಂದರು.
ದೇಶದ ಸಂವಿಧಾನವನ್ನು ಒಪ್ಪದ ಮನುವಾದಿಗಳ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟಿದ್ದೇವೆ. ಮನುವಾದ ಜ್ಯಾರಿ ಮಾಡಲು ಹೊರಟಿರುವದು ಮೂರ್ಖತನ. ಇನ್ನು ಸಂವಿಧಾ ನದ ವಿರೋಧ ಹೇಳಿಕೆ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು. ಪ್ರಧಾನಮಂತ್ರಿಯವರು ಮಧ್ಯೆ ಪ್ರವೇಶಿಸಿ ಇವರ ಬಾಯಿ ಮುಚ್ಚಿಸಬೇಕು. ರಾಜ್ಯದ ಮುಖ್ಯಮಂತ್ರಿಯವರು ಕೂಡಾ ಮಧ್ಯೆ ಪ್ರವೇಶಿಸಿ ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಜಿಪಂ ಸದಸ್ಯ ಶೇಖರ್ ಕುಕ್ಕೇಡಿ ಅವರು, ಉಡುಪಿ ಮಠದಲ್ಲಿ ಸಹಪಂಕ್ತಿ ಭೋಜನದ ಬಗ್ಗೆ ಮಾತನಾಡದವರು ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ದೇಶದ ಮಾದರಿ ಸಂವಿಧಾನಕ್ಕೆ ಚ್ಯುತಿ ಬರುವ ವಿಚಾರಕ್ಕೆ ನಮ್ಮ ವಿರೋಧ ಇದೆ. ಉಗ್ರ ಹೋರಾಟಕ್ಕೂ ಸಿದ್ಧ ಎಂದರು.
ಸಾಮಾಜಿಕ ಚಿಂತಕ ಧಮ್ಮಾನಂದ, ದಸಂಸ(ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ವೆಂಕಣ್ಣ ಕೊಯ್ಯೂರು ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಪ್ರತಿಭಟನೆಕಾರರು ಪೇಜಾವರ ಶ್ರೀ ಹಾಗೂ ಗೋ. ಮಧುಸೂದನ ಅವರ ಪ್ರತಿಕೃತಿ ದಹನ ಮಾಡಿದರು. ಬಳಿಕ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ನಂತರ ಬೆಳ್ತಂಗಡಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಮುಖಂಡರುಗಳಾದ ಬಿ.ಕೆ ವಸಂತ ನೇಮಿರಾಜ್ ಕಿಲ್ಲೂರು, ನಾಗರಾಜ್ ಎಸ್. ಲಾಲ, ನಾರಾಯಣ ಪುದುವೆಟ್ಟು, ಬೇಬಿ ಸುವರ್ಣ, ಸೇಸಪ್ಪ ನಲಿಕೆ, ಶ್ರೀಧರ ಕಳೇಂಜ, ನೀಲಮ್ಮ, ಓಬಯ್ಯ ಹೊಸಂಗಡಿ ಮೊದಲಾದವರು ನೇತೃತ್ವ ವಹಿಸಿದರು.