ಉಳ್ಳಾಲ: ಬೃಹತ್ ಮಿಲಾದ್ ಪ್ರಭಾಷಣ, ಅಭಿನಂದನಾ ಕಾರ್ಯಕ್ರಮ
ಉಳ್ಳಾಲ, ಡಿ. 4: ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿ ಹಾಗೂ ಉಳ್ಳಾಲ ಜಮಾಅತ್ ಇದರ ಅಂಗಸಂಸ್ಥೆಯಾದ ಸೈಯದ್ ಮದನಿ ಸೋಷಿಯಲ್ ಫ್ರಂಟ್ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ಅವರ ಜನ್ಮದಿನಾಚರಣೆಯ ಪ್ರಯುಕ್ತ ಬೃಹತ್ ಮಿಲಾದ್ ಪ್ರಭಾಷಣ, ಅಭಿನಂದನಾ ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭಾ ಸಂಗಮ ಕಾರ್ಯಕ್ರಮವು ಡಿ.6ರಂದು ಸಂಜೆ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ಕಣಚೂರು ಮೋನು ಹಾಜಿ, ಉಪಾಧ್ಯಕ್ಷ ಬಾವು ನೆಕ್ಕರೆ, ಹಾಜಿ ಶಾಹುಲ್ ಹಮೀದ್ ಮೆಟ್ರೋ ಹಾಗೂ ಸದಸ್ಯರಾದ ಯು.ಕೆ.ಮೋನು ಇಸ್ಮಾಯಲ್, ಯು.ಎಸ್. ಅಬೂಬಕರ್ ಹಾಜಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಉಳ್ಳಾಲ ದರ್ಗಾ ಸಮಿತಿ ಹಾಗೂ ಉಳ್ಳಾಲ ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಉದ್ಘಾಟಿಸಲಿದ್ದಾರೆ. ಉಳ್ಳಾಲ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ಅವರು ದುವಾ ನೆರವೇರಿಸಲಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅವರು ಅಭಿನಂದನೆಯನ್ನು ನೆರವೇರಿಸಲಿದ್ದಾರೆ. ಮಗ್ರಿಬ್ ನಮಾಝಿನ ಬಳಿಕ ಅಂತಾರಾಷ್ಟ್ರೀಯ ಖ್ಯಾತಿಯ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪ್ರವಾದಿ ಪ್ರೇಮ ವಿಷಯದಲ್ಲಿ ಮುಖ್ಯ ಪ್ರಭಾಷಣಗಯ್ಯಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಹಲವು ಸಾಮಾಜಿಕ, ರಾಜಕೀಯ, ದುರೀಣರು, ಧಾರ್ಮಿಕ ನಾಯಕರು ಭಾಗವಹಿಸಿಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸೈಯದ್ ಮದನಿ ಸೋಷಿಯಲ್ ಫ್ರಂಟ್ ಕಾರ್ಯಾಧ್ಯಕ್ಷ ಹಾಜಿ ಮಹಮ್ಮದ್ ತ್ವಾಹಾ, ಸೈಯದ್ ಮದನಿ ದರ್ಗಾ ಸಮಿತಿ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಬಾವಾ ಮಹಮ್ಮದ್, ಸದಸ್ಯರಾದ ಹಮೀದ್ ಕೋಡಿ, ಅಶ್ರಫ್ ಮುಕ್ಕಚ್ಚೇರಿ, ಅರೆಬಿಕ್ ಟ್ರಸ್ಟ್ ಸದಸ್ಯ ಯು.ಕೆ.ಯೂಸೂಫ್, ಸಂಚಾಲಕರಾದ ಉಸ್ಮಾನ್ ಕಲ್ಲಾಪು, ಪೊಡಿಮೋನು ಇಸ್ಮಾಯಿಲ್, ಅಯ್ಯೂಬ್ ಮಂಚಿಲ ಇನ್ನಿತರರು ಉಪಸ್ಥಿತರಿದ್ದರು.