ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಸರ್ವಾಂಗೀಣ ಏಳಿಗೆ: ಹೆಸ್ಕತ್ತೂರು
ಬ್ರಹ್ಮಾವರ, ಡಿ.4: ಶಾಲೆಯಲ್ಲಿ ಓದಿ ಒಳ್ಳೆ ಅಂಕ ಗಳಿಸಿದರೆ ಸಾಕು ಎಂಬ ಮನೋಭಾವ ಹೆತ್ತವರಲ್ಲಿದೆ. ಆದರೆ ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಸರ್ವಾಂಗೀಣ ಏಳಿಗೆ ದೃಷ್ಠಿಯಿಂದ ಅತಿ ಅಗತ್ಯ. ಮಕ್ಕಳು ಪಠ್ಯ ಜ್ಞಾನಕ್ಕೆ ಮಾತ್ರ ಸೀಮಿತವಾಗಿರದೆ ಸದಾ ಚಟುವಟಿಕೆ ಯಿಂದ ಭಾಗವಹಿಸಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ.ಎನ್.ಚಂದ್ರಶೇಖರ ಶೆಟ್ಟಿ ಹೆಸ್ಕತ್ತೂರು ಹೇಳಿದ್ದಾರೆ.
ಕರ್ನಾಟಕ ಬಾಲವಿಕಾಸ ಅಕಾಡಮಿ ಧಾರವಾಡ, ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಕೊರ್ಗಿ ಗ್ರಾಪಂ ಹಾಗೂ ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ನಮ್ಮ ಗ್ರಾಮ ನಮ್ಮ ಮಕ್ಕಳು ಸಾಮಾಜಿಕ ಉಪಯೋಗಿ ಉತ್ಪಾದನಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಸೂಕ್ಷ ಸಂವೇದನೆ, ನಾಯಕತ್ವ ತರಬೇತಿ, ಗುಂಪು ಚಟುವಟಿಕೆಯಲ್ಲಿ ತೊಡಗಿಸಿ ಅನೇಕ ಕರಕುಶಲ ವಸ್ತುಗಳನ್ನು ಕಲಿಸುವ ಪ್ರಯತ್ನ ನಿಜಕ್ಕೂ ಅಭಿ ನಂದನಾರ್ಹ. ಮಕ್ಕಳಿಗೆ ಪ್ಲಾಸ್ಟಿಕ್ ಮುಕ್ತ ವಸ್ತುಗಳಾದ ಕೈಚೀಲ, ಕಾಗದದಿಂದ ಚೀಲ, ಹೂಗುಚ್ಛ, ಉಬ್ಬು ಕಲೆ, ಮುಖವಾಡ ಮುಂತಾದ ವಿವಿಧ ಕಲಾಕೃತಿ ಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿ, ಕಲಿಸಲಾಗುವುದು ಮತ್ತು ವಿದ್ಯಾರ್ಥಿಗಳು ಅದನ್ನು ಕಲಿತು ಇತರರಿಗೂ ಕಲಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕೊರ್ಗಿ ಗ್ರಾಪಂ ಅಧ್ಯಕ್ಷೆ ಗಂಗೆ ಕುಲಾಲ್ತಿ ಮಾತನಾಡಿ, ಮಕ್ಕಳಿಗೆ ರಜಾ ಅಥವಾ ಸಮಯವನ್ನು ಸದ್ವಿನಿಯೋಗ ಮಾಡುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಕನಿಷ್ಠ 4-5 ದಿನ ನಡೆಸಲು ನಮ್ಮ ಪಂಚಾಯತ್ ಸಹಕಾರ ನೀಡುತ್ತದೆ. ಮಕ್ಕಳನ್ನು ಟಿ.ವಿ, ಮೊಬೈಲ್‌ನಿಂದ ದೂರವಿರಿಸಲು ಇದು ಪ್ರಬಲವಾದ ಅಸ್ತ್ರವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಿನಾಯಕ ನಾಕ್ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಲಲಿತ ಭಟ್, ಸದಸ್ಯ ಗೌರೀಶ ಹೆಗ್ಡೆ, ಪ್ರೌಢ ಶಾಲೆಯ ಮುಖ್ಯಸ್ಥ ಉದಯಕುಮಾರ್ ಶೆಟ್ಟಿ, ಕೆ.ಎನ್. ಚಂದ್ರಶೇಖರ ಶೆಟ್ಟಿ, ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಸಂಪನ್ಮೂಲ ವ್ಯಕ್ತಿಗಳಾಗಿ ಜ್ಯೋತಿ ಬಾಳ್ಕದ್ರು ವಿಜಯಲಕ್ಷ್ಮಿ ಕುತ್ಪಾಡಿ, ಸುಮ ಕುತ್ಪಾಡಿ ಉಪಸ್ಥಿತರಿದ್ದರು.
ರಮೇಶ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜ್ ಎಸ್.ಆಚಾರ್ಯ ವಕ್ವಾಡಿ ವಂದಿಸಿದರು. ಅಶ್ವಿನಿ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು. ಸುಮಾರು 126 ವಿದ್ಯಾರ್ಥಿಗಳು ಈ ಕಾರ್ುಕ್ರಮದ ಪ್ರಯೋಜನ ಪಡೆದರು.