ಎಲ್ಲಾ ಮೀನುಗಾರರನ್ನು ರಕ್ಷಿಸುವವರೆಗೆ ಕಾರ್ಯಾಚರಣೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Update: 2017-12-04 15:06 GMT

ತಿರುವನಂತಪುರಂ, ಡಿ.4: ಕೇರಳದ ಕರಾವಳಿ ಪ್ರದೇಶಕ್ಕೆ ಓಖಿ ಚಂಡಮಾರುತ ಅಪ್ಪಳಿಸಿದಂದಿನಿಂದ ನಾಪತ್ತೆಯಾಗಿರುವ ಎಲ್ಲಾ ಮೀನುಗಾರರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತರುವ ವರೆಗೆ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

100ಕ್ಕೂ ಹೆಚ್ಚು ಮೀನುಗಾರರು ಇನ್ನೂ ನಾಪತ್ತೆಯಾಗಿದ್ದು ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಹಡಗುಗಳು, ಹೆಲಿಕಾಪ್ಟರ್‌ಗಳು, ತಟರಕ್ಷಣಾ ಪಡೆಯ ದೋಣಿಗಳು ಹಾಗೂ ವಾಯುಪಡೆಯ ವಿಮಾನಗಳು ಸತತವಾಗಿ ಕಾರ್ಯಾಚರಣೆ ಮುಂದುವರಿಸಿವೆ ಎಂದು ಅವರು ಹೇಳಿದ್ದಾರೆ.

   ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಸಭೆ ನಡೆಸಿದ ಅವರು ಪರಿಹಾರ ಮತ್ತು ಶೋಧ ಕಾರ್ಯಾಚರಣೆಯ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಮೃತಪಟ್ಟಿರುವ ಅಥವಾ ದೋಣಿ ಮತ್ತಿತರ ಉಪಕರಣಗಳನ್ನು ಕಳೆದುಕೊಂಡಿರುವ ಮೀನುಗಾರರ ಕುಟುಂಬವರ್ಗದವರಿಗೆ ನೀಡಲಾಗುವ ಪರಿಹಾರ ಧನವನ್ನು ಹೆಚ್ಚಿಸಬೇಕೆಂಬ ಕೋರಿಕೆಯನ್ನು ಸೂಕ್ತ ವಿಧಾನದಲ್ಲಿ ಸಲ್ಲಿಸಲು ತಿಳಿಸಿದ ಅವರು, ಕೇರಳದ ವಾಸ್ತವಿಕ ಪರಿಸ್ಥಿತಿಯ ಕುರಿತು ತಾನು ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವರಿಗೆ ಮಾಹಿತಿ ನೀಡುತ್ತೇನೆ. ಮೀನುಗಾರ ಸಮುದಾಯದವರು ಭಾರೀ ಸಂಕಷ್ಟದಲ್ಲಿದ್ದಾರೆ ಎಂಬುದು ತನಗೆ ಮನವರಿಕೆಯಾಗಿದೆ ಎಂದರು.

ಚಂಡಮಾರುತ ಎಚ್ಚರಿಕೆ ಲಭ್ಯವಾಗುವುದಕ್ಕಿಂತಲೂ ಮೊದಲೇ ಸಮುದ್ರಕ್ಕೆ ಇಳಿದಿದ್ದ ಹಲವಾರು ಮೀನುಗಾರರನ್ನು ಸಮುದ್ರದಲ್ಲಿ ಪತ್ತೆಹಚ್ಚಲಾಗಿದ್ದು ಅವರಿಗೆ ನೀರು ಮತ್ತು ಆಹಾರ ಒದಗಿಸಲಾಗಿದೆ. ಆದ್ದರಿಂದ ಒಂದುಕ್ಷಣದ ಮಟ್ಟಿಗೂ ತಾನು ಭರವಸೆ ಕಳೆದುಕೊಂಡಿಲ್ಲ ಎಂದರು. ರಕ್ಷಣಾ ತಂಡದ ಜೊತೆ ಕೆಲವು ಮೀನುಗಾರರನ್ನೂ ಸೇರಿಸಿಕೊಳ್ಳಬೇಕೆಂಬ ಬೇಡಿಕೆಯನ್ನು ಪರಿಗಣಿಸಿ ಈಗಾಗಲೇ 11 ಮಂದಿಯನ್ನು ನೌಕಾಪಡೆಯ ದೋಣಿ ಮತ್ತು ಹೆಲಿಕಾಪ್ಟರ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು.

   ರಕ್ಷಣಾ ಕಾರ್ಯಾಚರಣೆಯಲ್ಲಿ ಹೊಂದಾಣಿಕೆಯ ಕೊರತೆ ಇದೆ ಎಂದು ಇದಕ್ಕೂ ಮೊದಲು ಸ್ಥಳೀಯ ಮೀನುಗಾರರು ಆರೋಪಿಸಿದ್ದು, ಕೆಲವರು ಘೋಷಣೆಯನ್ನೂ ಕೂಗಿದರು. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ, ನಾನು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಚಂಡಮಾರುತದ ಎಚ್ಚರಿಕೆಯನ್ನು ನ.29ರಂದು ನೀಡಲಾಗಿದ್ದು ನ.30ರಂದು ಶೋಧ ಕಾರ್ಯಾಚರಣೆ ಆರಂಭವಾಗಿದೆ. ನೌಕಾಪಡೆ, ತಟರಕ್ಷಣಾ ಪಡೆ ಹಾಗೂ ವಾಯುಪಡೆಯವರು ತಮ್ಮ ಕಾರ್ಯ ಆರಂಭಿಸಿದ್ದಾರೆ. ಹಲವಾರು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನಮ್ಮ ಕಾರ್ಯಾಚರಣೆ ಮುಗಿದಿಲ್ಲ. ಈ ಹಿಂದೆ ಭಾರತದ ಕರಾವಳಿಯನ್ನು ಸುನಾಮಿ ಅಪ್ಪಳಿಸಿದಾಗಲೂ ಈ ರೀತಿಯ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿರಲಿಲ್ಲ ಎಂದರು. ಕೇರಳದ ಮೀನುಗಾರಿಕಾ ಸಚಿವೆ ಮರ್ಸಿಕುಟ್ಟಿ ಹಾಗೂ ದೇವಸ್ವಂ ಇಲಾಖೆಯ ಸಚಿವ ಕಡಕಂಪಳ್ಳಿ ಸುರೇಂದ್ರನ್ ಸಚಿವೆಯ ಜತೆಗಿದ್ದರು.

286 ಮೀನುಗಾರರ ರಕ್ಷಣೆ

ರವಿವಾರ ಟ್ವೀಟ್ ಮಾಡಿದ್ದ ಸಚಿವೆ ನಿರ್ಮಲಾ ಸೀತಾರಾಮನ್, ಕೇರಳದ 121 ಮೀನುಗಾರರನ್ನು ನೌಕಾಪಡೆ ಹಾಗೂ 15 ಮೀನುಗಾರರನ್ನು ವಾಯುಪಡೆ ರಕ್ಷಿಸಿದೆ. ತಟರಕ್ಷಣಾ ಪಡೆ ಕೇರಳದ 114 ಮಂದಿಯನ್ನು ರಕ್ಷಿಸಿದೆ. ಸರಕು ನೌಕೆಗಳು ಹಾಗೂ ಟ್ರಾಲ್ ದೋಣಿಗಳು ಕೇರಳ ಮತ್ತು ಲಕ್ಷದ್ವೀಪದ ಸಮುದ್ರ ವ್ಯಾಪ್ತಿಯಲ್ಲಿ 36 ಮಂದಿಯನ್ನು ರಕ್ಷಿಸಿವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News