ಮಾಲಿನ್ಯನಿಯಂತ್ರಿಸಲು ವಿಫಲ: ಆಪ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಹಸಿರು ಪೀಠ
ಹೊಸದಿಲ್ಲಿ, ಡಿ.4: ರಾಜ್ಯದ ಉಸಿರುಗಟ್ಟಿಸಿರುವ ವಾಯುಮಾಲಿನ್ಯವನ್ನು ತಡೆಯಲು ಸಮಗ್ರ ಯೋಜನೆಯನ್ನು ರೂಪಿಸದ ದಿಲ್ಲಿ ಸರಕಾರದ ವಿರುದ್ಧ ಹರಿಹಾಯ್ದ ರಾಷ್ಟ್ರೀಯ ಹಸಿರುಪೀಠ ಕೆಟ್ಟ ಹವಾಗುಣದ ಹೊರತಾಗಿಯೂ ಭಾರತ-ಶ್ರೀಲಂಕಾ ಕ್ರಿಕೆಟ್ ಪಂದ್ಯಾಟವನ್ನು ರಾಜಧಾನಿಯಲ್ಲಿ ಆಯೋಜಿಸಿದ ಮಂಡಳಿಯನ್ನೂ ತರಾಟೆಗೆ ತೆಗೆದುಕೊಂಡಿದೆ.
ತನ್ನ ಆದೇಶದ ಹೊರತಾಗಿಯೂ ವಾಯುಮಾಲಿನ್ಯದ ಬಗ್ಗೆ ವರದಿಯನ್ನು ನೀಡಲು ವಿಫಲವಾದ ಆಪ್ ಸರಕಾರದ ವಿರುದ್ಧ ಎನ್‌ಜಿಟಿ ಮುಖ್ಯಸ್ಥ ನ್ಯಾಯಾಧೀಶ ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಆಕ್ರೋಶ ವ್ಯಕ್ತಪಡಿಸಿದೆ.
ಪರಿಸರ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗಳು ಇತ್ತೀಚೆಗಷ್ಟೇ ಬದಲಾಗಿರುವ ಕಾರಣ ಮಾಲಿನ್ಯ ತಡೆಯಲು ಯೋಜನೆಗಳ ವರದಿಯನ್ನು ನೀಡಲು ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ದಿಲ್ಲಿ ಸರಕಾರ ತಿಳಿಸಿದೆ. ಆದರೆ 48 ಗಂಟೆಗಳ ಒಳಗೆ ವರದಿಯನ್ನು ನೀಡುವಂತೆ ಪೀಠ ಸರಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ಮಾಲಿನ್ಯ ಮಟ್ಟವು ಅಪಾಯಕಾರಿ ಹಂತವನ್ನು ತಲುಪಿದ್ದರೂ ಆಪ್ ಸರಕಾರ ಮಾತ್ರ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಪೀಠ ಆರೋಪಿಸಿದೆ. ತೀವ್ರ ಉಸಿರುಗಟ್ಟಿಸುವ ವಾತಾವರಣದಿಂದಾಗಿ ಅಡಚಣೆಗೀಡಾದ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯವನ್ನು ದಿಲ್ಲಿಯಲ್ಲಿ ಆಯೋಜಿಸಿದ ವಿರುದ್ಧವೂ ಪೀಠವು ಕಿಡಿಕಾರಿದೆ. ಶ್ರೀಲಂಕಾ ತಂಡವು ಕಳಪೆ ವಾಯುಗುಣಮಟ್ಟದ ಬಗ್ಗೆ ದೂರು ನೀಡಿದ ಕಾರಣ ಭಾರತವು ತನ್ನ ಇನ್ನಿಂಗ್ಸನ್ನು ಘೋಷಿಸಬೇಕಾಗಿ ಬಂದಿತ್ತು.
ಈ ವಾರ ವಾಯುಮಾಲಿನ್ಯವು ಅತ್ಯಂತ ಹೆಚ್ಚಾಗಿರಲಿದೆ ಎಂದು ಪ್ರತಿಯೊಂದು ಪತ್ರಿಕೆಯೂ ಮುಖ್ಯಪುಟದಲ್ಲಿ ವರದಿ ಮಾಡಿದೆ. ಆದರೂ ನೀವು ಕ್ರಮವನ್ನು ಕೈಗೊಂಡಿಲ್ಲ. ಇನ್ನು ಆಟಗಾರರೂ ಕೂಡಾ ಮಾಸ್ಕ್ ಧರಿಸಿಕೊಂಡು ಆಡಿದ್ದಾರೆ. ಇಂತಹ ಕೆಟ್ಟ ವಾತಾವರಣದಲ್ಲಿ ನೀವು ಪಂದ್ಯವನ್ನು ಆಯೋಜಿಸಬಾರದಿತ್ತು. ದಿಲ್ಲಿಯ ಜನರು ಈ ಕಷ್ಟವನ್ನು ಅನುಭವಿಸಬೇಕೇ? ಎಂದು ಪೀಠವು ಸರಕಾರವನ್ನು ಪ್ರಶ್ನಿಸಿದೆ.
ಸಮ-ಬೆಸ ಕಾರು ಸಂಚಾರ ವ್ಯವಸ್ಥೆಯನ್ನು ಪ್ರತಿಪಾದಿಸುವ ನೀವು ದ್ವಿಚಕ್ರ ವಾಹನಗಳನ್ನು ಇದರಿಂದ ಹೊರಗಿಡಬೇಕು ಎಂದು ಹೇಳುತ್ತೀರಿ. ಆದರೆ 60 ಲಕ್ಷ ದ್ವಿಚಕ್ರ ವಾಹಗಳಿಂದಲೇ ಅತೀಹೆಚ್ಚು ವಾಯುಮಾಲಿನ್ಯ ಸಂಭವಿಸುತ್ತಿದೆ ಎಂಬುದು ನಿಮ್ಮ ತಲೆಗೆ ಯಾಕೆ ಹೋಗುತ್ತಿಲ್ಲ ಎಂದು ಪೀಠವು ಪ್ರಶ್ನಿಸಿದೆ. ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು 4000 ಬಸ್‌ಗಳನ್ನು ಪರಿಚಯಿಸುವುದಾಗಿ ಮೂರು ವರ್ಷಗಳ ಹಿಂದೆ ತಿಳಿಸಿದ್ದೀರಿ. ಆದರೆ ಕೇವಲ ಒಂದು ಹೊಸ ಬಸ್ ಕೂಡಾ ಇನ್ನೂ ರಸ್ತೆಗಿಳಿದಿಲ್ಲ ಎಂದು ಪೀಠ ಕಿಡಿಕಾರಿತು.