×
Ad

ಯುವ ಮೋರ್ಚಾ ಪ್ರತಿಭಟನೆ: ಸಿದ್ದರಾಮಯ್ಯ ಪ್ರತಿಕೃತಿ ದಹನ

Update: 2017-12-04 22:50 IST

ಉಡುಪಿ, ಡಿ.4: ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿರುವುದನ್ನು ವಿರೋಧಿಸಿ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ಹಿಂದುತ್ವ ವಿರೋಧಿ ನೀತಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸೋಮವಾರ ಜಿಲ್ಲಾ ಬಿಜೆಪಿ ಕಚೇರಿ ಎದುರು ಮುಖ್ಯ ಮಂತ್ರಿ ಸಿದ್ದರಾಮಯ್ಯರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು.

ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಯಾವುದೇ ಸಾಧನೆ ಮಾಡದ ಸಿದ್ದರಾಮಯ್ಯ ಸರಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈ ಸರಕಾರ ಅಲ್ಪಸಂಖ್ಯಾತರ ಪರವಾಗಿದ್ದರೂ ಪರವಾಗಿಲ್ಲ. ಆದರೆ ಕಟ್ಟಾ ಹಿಂದೂ ವಿರೋಧಿಯಂತೆ ವರ್ತಿಸುವುದು ಸರಿಯಲ್ಲ. ಹಿಂದೂಗಳನ್ನು ಧಮನಿಸುವ ಅಜೆಂಡಾ ಕಾಂಗ್ರೆಸ್ ಸರಕಾರದ್ದಾಗಿದೆ ಎಂದು ಹೇಳಿದರು.

ಇತರ ಧರ್ಮೀಯರ ಹಬ್ಬ ಕಾರ್ಯಕ್ರಮಗಳಿಗೆ ಫ್ಲೆಕ್ಸ್ ಹಾಕಿ ಶುಭಕೋರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್, ಸಿದ್ದರಾಮಯ್ಯಗೆ ಹೆದರಿ ಹಿಂದೂ ಸಮಾಜೋತ್ಸವ, ಧರ್ಮಸಂಸದ್‌ನಲ್ಲಿ ಭಾಗವಹಿಸದೆ ಹಿಂದೂ ವಿರೋಧಿ ಯಾಗಿ ನಡೆದುಕೊಂಡಿದ್ದಾರೆ. ಪೇಜಾವರ ಶ್ರೀ ಸಂವಿಧಾನ ಹಾಗೂ ದಲಿತ ವಿರೋಧಿ ಹೇಳಿಕೆ ನೀಡದಿದ್ದರೂ ಅವರ ವಿರುದ್ಧ ಕಾಂಗ್ರೆಸಿಗರು ಟೀಕೆಗಳನ್ನು ಮಾಡಿ ಪ್ರತಿಭಟನೆಗಳನ್ನು ನಡೆಸಿದರು ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ತಾಪಂ ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ಮುಖಂಡರಾದ ಕಿರಣ್ ಕುಮಾರ್, ರಶ್ಮಿತಾ ಬಾಲಕೃಷ್ಣ, ವೀಣಾ ಶೆಟ್ಟಿ, ಪ್ರವೀಣ್ ಪೂಜಾರಿ, ಲೀಲಾ ಆರ್.ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News