ಡಿ.21: ಕಂಕನಾಡಿಯಲ್ಲಿ ‘ಸೌಹಾರ್ದ ಕ್ರಿಸ್‌ಮಸ್’ ಆಚರಣೆ
ಮಂಗಳೂರು, ಡಿ.5: ಕಳೆದ ಎರಡು ವರ್ಷಗಳಿಂದ ಸರ್ವಧರ್ಮಗಳ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಸರ್ವಧರ್ಮಗಳ ಸಂದೇಶ ಸಾರಲಾಗುತ್ತಿದೆ. ಈ ನಿಟ್ಟಿನಲ್ಲಿ ‘ಸೌಹಾರ್ದ ಕ್ರಿಸ್‌ಮಸ್ 2017’ ಕಾರ್ಯಕ್ರವನ್ನು ಸರ್ವಧರ್ಮಿಯರೊಂದಿಗೆ ಸೇರಿಕೊಂಡು ಕಂಕನಾಡಿ ಮಾರುಕಟ್ಟೆ ಬಳಿಯ ಸಾರ್ವಜನಿಕ ಮೈದಾನದಲ್ಲಿ ಡಿ. 21ರಂದು ಆಚರಿಸಲಾಗುವುದು ಎಂದು ವಿಧಾನ ಪರಿಷತ್‌ನ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸೌಹಾರ್ದ ಕಾರ್ಯಕ್ರಮದಲ್ಲಿ ಕ್ರಿಸ್‌ಮಸ್ ಕ್ಯಾರೆಲ್ ಸ್ಪರ್ಧೆ, ನಕ್ಷತ್ರ ಸ್ಪರ್ಧೆ, ಕ್ರಿಸ್‌ಮಸ್ ಕೇಕ್ ಸ್ಪರ್ಧೆ ಮತ್ತು ಸಂತ ಕ್ಲಾಸ್ ಸ್ಪರ್ಧೆಗಳನ್ನು ನಡೆಸಲಾಗುವುದು. ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ., ತೃತೀಯ 2 ಸಾವಿರ ರೂ. ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಈ ಎಲ್ಲ ಸ್ಪರ್ಧೆಗಳು ಸಂಜೆ 4:30ಕ್ಕೆ ಪ್ರಾರಂಭಗೊಳ್ಳಲಿದೆ. ಕಾರ್ಯಕ್ರಮದ ಸಂಚಾಲಕರಾಗಿ ನಾಗೇಂದ್ರ ಕುಮಾರ್, ಶಶಿಕಾಂತ್ ಶೆಟ್ಟಿಘಿ, ಸಿರಿಲ್ ಡಿಸೋಜ, ಸತೀಶ್ ಪೆಂಗಾಲ್, ಸನಿಲ್ ತೋರಾಸ್, ಆನಂದ ಸೋನ್ಸ್ ಕಾರ್ಯನಿರ್ವಹಿಸಲಿದ್ದಾರೆ. 80 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದರು.
ಸಂಜೆ 7 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಯರ್ ಕವಿತಾ ಸನಿಲ್ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಚಿವ ಪ್ರಮೋದ್ ಮಧ್ವರಾಜ್, ಕೇಂದ್ರ ಮಾಜಿ ಸಚಿವರಾದ ಆಸ್ಕರ್ ರ್ನಾಂಡಿಸ್ ಭಾಗವಹಿಸುವರು ಎಂದು ಐವನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಸ್ಕರ್ ಕೆ., ಸತೀಶ್ ಪೆಂಗಲ್, ಆನಂದ ಸೋನ್ಸ್ , ಸಿರಾಜ್ ಬಜಪೆ ಹಾಗು ಇತರರು ಉಪಸ್ಥಿತರಿದ್ದರು.