ಜಾಗತಿಕ ಉದ್ಯೋಗಪತಿಗಳ ಸಮ್ಮೇಳನದ ನಂತರ ಮತ್ತೆ ಹೈದರಾಬಾದ್‌ನಲ್ಲಿ ಭಿಕ್ಷುಕರ ಹಾವಳಿ
ಹೈದರಾಬಾದ್, ಡಿ.5: ಹೈದರಾಬಾದ್‌ನಲ್ಲಿ ನಡೆದ ಜಾಗತಿಕ ಉದ್ಯೋಗಪತಿಗಳ ಸಮ್ಮೇಳನ ಮುಗಿಯುತ್ತಿದ್ದಂತೆ ನಗರದಾದ್ಯಂತ ಮತ್ತೆ ಭಿಕ್ಷುಕರು ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಭಿಕ್ಷುಕರು ಮತ್ತೆ ನಗರದಲ್ಲಿ ಕಾಣಿಸಿಕೊಂಡಿರುವುದರಿಂದ ಅಂತಾರಾಷ್ಟ್ರೀಯ ಸಮ್ಮೇಳನದ ನಂತರವೂ ನಗರವನ್ನು ಭಿಕ್ಷುಕರಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲಾಗುವುದು ಎಂಬ ಅಧಿಕಾರಿಗಳ ಮಾತನ್ನು ನಂಬಿದ್ದ ಸ್ಥಳೀಯರಿಗೆ ಭ್ರಮನಿರಸನವಾಗಿದೆ.
ಅಕ್ಟೋಬರ್ 20ರಂದು ತೆಲಂಗಾಣ ರಾಜ್ಯ ಕಾರಾಗೃಹ ಇಲಾಖೆಯು ಆಪರೇಶನ್ ಭಿಕ್ಷುಕರು ಅಭಿಯಾನವನ್ನು ಆರಂಭಿಸಿದ ನಂತರ ಹೈದರಾಬಾದ್ ನಗರವನ್ನು ಭಿಕ್ಷುಕ ಮುಕ್ತಗೊಳಿಸುವ ಬಗ್ಗೆ ಭರವಸೆ ಮೂಡಿತ್ತು. ಸಮ್ಮೇಳನ ಆರಂಭಕ್ಕೆ ಹತ್ತು ದಿನಗಳು ಬಾಕಿಯಿರುವಾಗ ಗ್ರೇಟರ್ ಹೈದರಾಬಾದ್ ನಗರಪಾಲಿಕೆ ಮತ್ತು ಪೊಲೀಸ್ ಇಲಾಖೆ ಕೂಡಾ ಈ ಅಭಿಯಾನದೊಂದಿಗೆ ಕೈಜೋಡಿಸಿದ್ದವು.
ಈ ಕಾರ್ಯಾಚರಣೆಯು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು ಮತ್ತು ನಗರವನ್ನು ಭಿಕ್ಷುಕ ಮುಕ್ತಗೊಳಿಸುವಲ್ಲಿ ಯಶಸ್ವಿಯೂ ಆಗಿತ್ತು. 300ಕ್ಕೂ ಅಧಿಕ ಭಿಕ್ಷುಕರನ್ನು ಆನಂದ ಆಶ್ರಮ ಮತ್ತು ಇತರ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲಾಗಿತ್ತು. ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುವ ವೇಳೆ ನಗರವನ್ನು ಭಿಕ್ಷುಕ ಮುಕ್ತ ವಲಯವಾಗಿ ಮಾರ್ಪಡಿಸಲಾಗಿತ್ತು.
ಸಮ್ಮೇಳನದ ನಂತರವೂ ಅಧಿಕಾರಿಗಳು ಭಿಕ್ಷುಕರ ವಿರುದ್ಧ ಕಾರ್ಯಾಚರಣೆ ಮುಂದುವರಿಸುತ್ತಾರೆ ಎಂದು ಸ್ಥಳೀಯರು ಭಾವಿಸಿದ್ದರು. ಆದರೆ ಡಿಸೆಂಬರ್ 1ರ ನಂತರ ಮತ್ತೆ ಆಪರೇಶನ್ ಭಿಕ್ಷುಕ ವನ್ನು ಪುನರ್ ಆರಂಭಿಸುವುದರ ಬಗ್ಗೆ ಅಧಿಕಾರಿಗಳು ತಿಳಿಸಿದ್ದರೂ ಬಹುತೇಕ ಎಲ್ಲಾ ಭಿಕ್ಷುಕರು ಮರಳಿ ಬೀದಿಗಿಳಿದಿದ್ದಾರೆ.
ಭಿಕ್ಷುಕರು ಮುಖ್ಯವಾಗಿ ಧಾರ್ಮಿಕ ಪ್ರದೇಶಗಳು ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿ ವಾಪಸ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ರವಿವಾರದಿಂದ ಭಿಕ್ಷುಕರು ನಗರದ ಪ್ರಮುಖ ಪ್ರದೇಶಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಮ್ಮೇಳನದ ಹಿನ್ನೆಲೆಯಲ್ಲಿ ನಗರವನ್ನು ಭಿಕ್ಷುಕ ಮುಕ್ತಗೊಳಿಸಿದ್ದ ಅಧಿಕಾರಿಗಳು ಈಗ ಆ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಧಿಕಾರಿಗಳು, ಮತ್ತೆ ಕಾರ್ಯಾಚರಣೆ ನಡೆಸಿ ನಗರವನ್ನು ಭಿಕ್ಷುಕ ಮುಕ್ತ ಗೊಳಿಸುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 25ರ ನಂತರ ನಗರದಲ್ಲಿ ಭಿಕ್ಷುಕರಿರುವ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳಿಗೆ ರೂ. 500 ಬಹಮಾನ ನೀಡುವ ಭರವಸೆಗೆ ನಾವು ಈಗಲೂ ಬದ್ಧರಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.