×
Ad

ಅಭಿವೃದ್ಧಿಯ ಓಟದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ

Update: 2017-12-05 20:23 IST

ಹೊಸದಿಲ್ಲಿ, ಡಿ.5: ಏಶ್ಯಾದ ಎರಡು ಬೃಹತ್ ರಾಷ್ಟ್ರಗಳಾದ ಭಾರತ ಮತ್ತು ಚೀನಾಗಳ ನಡುವಿನ ಸಂಬಂಧ ಮುಂದಿನ ಮೂರು ದಶಕದಲ್ಲೂ ಈಗಿರುವ ರೀತಿಯಲ್ಲೇ ಮುಂದುವರಿದರೆ ಅಭಿವೃದ್ಧಿಯ ವಿಷಯದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ನೀತಿ ಆಯೋಗ ಮತ್ತು ಚೀನಾದ ಅಭಿವೃದ್ಧಿ ಸಂಶೋಧನಾ ಕೇಂದ್ರ(ಡಿಆರ್‌ಸಿ) ನಡುವೆ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಎರಡೂ ದೇಶಗಳು ಪರಸ್ಪರ ಹೊಂದಾಣಿಕೆ ಮತ್ತು ಸಹಯೋಗದಿಂದ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದ ಅವರು, ಈಗ ವಿಶ್ವದಲ್ಲಿ ಹಾಗೂ ಏಶ್ಯಾದಲ್ಲಿ ಇರುವ ಪರಿಸ್ಥಿತಿ ಮುಂದಿನ 30 ವರ್ಷದಲ್ಲೂ ಮುಂದುವರಿದರೆ ಉಚ್ಛ ವಿಕಾಸದ ಶ್ರೇಯವನ್ನು ಚೀನಾದಿಂದ ಭಾರತವು ಕೈವಶ ಮಾಡಿಕೊಳ್ಳಲಿದೆ ಎಂದು ಹೇಳಿದರು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಇದೇ ಪ್ರಪ್ರಥಮ ಬಾರಿಗೆ ಏಕಕಾಲದಲ್ಲಿ ಅಮೆರಿಕ, ಯುರೋಪ್, ಜಪಾನ್ ಮುಂತಾದ ಪ್ರಮುಖ ರಾಷ್ಟ್ರಗಳ ಅರ್ಥವ್ಯವಸ್ಥೆಯಲ್ಲಿ ಚೇತರಿಕೆಯ ಲಕ್ಷಣ ಗೋಚರಿಸಿದ್ದು ಇದು ಜಾಗತಿಕ ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ . ಭಾರತ ಮತ್ತು ಚೀನಾ ಈ ಬೆಳವಣಿಗೆಯ ಲಾಭವನ್ನು ಪಡೆಯಬೇಕು . ಉಚ್ಛ ವಿಕಾಸ ಅಥವಾ ಅಧಿಕ ಅಭಿವೃದ್ಧಿಯಿಂದ ಭಾರತ ಮತ್ತು ಚೀನಾದಲ್ಲಿರುವ ಬಡತನವನ್ನು ನಿವಾರಿಸಲು ಸಾಧ್ಯ. ಸುಮಾರು 600 ಮಿಲಿಯನ್‌ಗಿಂತಲೂ ಹೆಚ್ಚಿನ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದ ಚೀನಾದ ಸಾಧನೆ ಶ್ಲಾಘನೀಯ ಎಂದರು.

ಚೀನಾದ ಸಾಧನೆಯನ್ನು ಭಾರತ ಅನುಸರಿಸಬೇಕಿದೆ. ಉದ್ಯೋಗದ ಹೆಚ್ಚಳದಿಂದ ಇದು ಸಾಧ್ಯವಾಗುತ್ತದೆ. ಚೀನಾವು ಭಾರತದಲ್ಲಿ ಮಾಡುತ್ತಿರುವ ಹೂಡಿಕೆಗಳು ಉದ್ಯೋಗ ಸೃಷ್ಟಿಸುವ ಕಾರಣ ಇದರ ಪ್ರಯೋಜನ ಪಡೆಯಬೇಕು . 2022ರಲ್ಲಿ ಭಾರತವು ಎರಡಂಕಿಯ ಅಭಿವೃದ್ಧಿ ದರ ಸಾಧಿಸಬೇಕು ಎಂಬುದು ಪ್ರಧಾನಿ ಮೋದಿಯ ಯೋಜನೆಯಾಗಿದೆ. ಭಾರತವು ಖಂಡಿತಾ ಈ ಅಭಿವೃದ್ಧಿ ದರವನ್ನು ಸಾಧಿಸಲಿದೆ. ಇದರಿಂದ ಹಸಿವು, ಕೊಳಕುತನ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತಿವಾದ ಮತ್ತು ಸಾಂಪ್ರದಾಯಕತೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಕುಮಾರ್ ಹೇಳಿದರು.

ರಾಜ್ಯಗಳು ಪರಸ್ಪರ ಸ್ಪರ್ಧೆ ನಡೆಸಲು ಪ್ರೋತ್ಸಾಹಿಸುವ ಮೂಲಕ ಸಾರ್ವಜನಿಕ ಕ್ಷೇತ್ರವನ್ನು ಹೆಚ್ಚು ಹೊಣೆಗಾರರನ್ನಾಗಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ . ರಾಜ್ಯ ಸರಕಾರಗಳು ಜನಪ್ರಿಯತೆ ಗಳಿಸಿಕೊಳ್ಳಲು ಸ್ಪರ್ಧೆ ನಡೆಸುವ ಬದಲು ಉತ್ತಮ ಆಡಳಿತ ನೀಡುವಲ್ಲಿ ಸ್ಪರ್ಧೆ ನಡೆಸಬೇಕೆಂದು ಕೇಂದ್ರ ಸರಕಾರ ಬಯಸುತ್ತಿದೆ. ಈ ಮೂಲಕ ಇದುವರೆಗೆ ಪ್ರಜಾಪ್ರಭುತ್ವಕ್ಕೆ ಮಾಡಿದ ವೆಚ್ಚದ ಲಾಭ ಮರಳಿ ಪಡೆಯಬೇಕೆಂದು ಸರಕಾರದ ಆಶಯವಾಗಿದೆ. ಭಾರತವು ಸಂವಹನೀಯ ಹಾಗೂ ಸಂಯುಕ್ತ ವಿಧಾನದಲ್ಲಿ ಎರಡಂಕಿಯ ಅಭಿವೃದ್ಧಿ ದರವನ್ನು ಸಾಧಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

 ಭಾರತವು ಈಗ ಬದಲಾವಣೆಯ ಯುಗದಲ್ಲಿದೆ. ನಾವು ಸಂಪೂರ್ಣ ವಿಭಿನ್ನವಾದ ಅಭಿವೃದ್ಧಿ ಪ್ರಕ್ರಿಯೆಯನ್ನು ಅನುಸರಿಸಬೇಕಿದೆ. ಚೀನಾವು ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಭಾರತಕ್ಕಿಂತ ಬಹಳಷ್ಟು ಮುಂದೆ ಸಾಗಿದೆ. ಆದರೆ ಇಂಜಿನಿಯರಿಂಗ್ ಹಾಗೂ ಲಘು ಉತ್ಪನ್ನ ಕ್ಷೇತ್ರದಲ್ಲಿ ನಮಗೆ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದ ಅವರು, ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಚೀನಾವನ್ನು ಆಹ್ವಾನಿಸಿದರು. ಈಗ ಸಾಗುತ್ತಿರುವ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿ ಭಾರತವು ಹಿಂದುಳಿಯದಿರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News