ಬಂಟ್ವಾಳ ವಿಧಾನಸಭಾ ಕ್ಷೇತ್ರ: ಜೆಡಿಎಸ್ ಕಾರ್ಯಕರ್ತರ ಸಭೆ
ಬಂಟ್ವಾಳ, ನ. 29: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ನಡೆಯಿತು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರವೂಫ್ ಪುತ್ತಿಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಪಕ್ಷಕ್ಕೆ ಕಾರ್ಯಕರ್ತರ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರಾದ್ಯಂತ ಪಕ್ಷ ಬಿಟ್ಟ ಕಾರ್ಯಕರ್ತರನ್ನು ಹಾಗೂ ಕೆಲ ನಾಯಕರನ್ನು ಮನವೊಲಿಸಿ ಮರಳಿ ಪಕ್ಷಕ್ಕೆ ಕರೆತರಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದನ್ನು ಮತ್ತೊಮ್ಮೆ ನೆನಪಿಸುವ ಹಾಗೂ ಮನೆ ಮನೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.
ಜೆಡಿಎಸ್‌ನ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಇಬ್ರಾಹಿಂ ಗೋಳಿಕಟ್ಟೆ, ಬಂಟ್ವಾಳ ಕ್ಷೇತ್ರ ಜೆಡಿಎಸ್ ಸಮಿತಿಯ ಅಧ್ಯಕ್ಷ ಬಿ. ಮೋಹನ್, ಪ್ರಮುಖರಾದ ಮುಹಮ್ಮದ್ ಶಫೀ, ಲಕ್ಷ್ಮಿನಾರಾಯಣ ಅಡ್ಯಂತಾಯ, ಅಬೂಬಕರ್ ಅಮ್ಮುಂಜೆ, ಪ್ರಕಾಶ್ ಗೋಮ್ಸ್, ಹಾರೂನ್ ರಶೀದ್, ಇಸ್ಮಾಯಿಲ್, ಅಕ್ಷಿತ್ ಸುವರ್ಣ, ಉಮೇಶ್ ಕುಮಾರ್, ಪ್ರವೀಣ್‌ಚಂದ್ರ ಜೈನ್, ರಮೇಶ್ ಪಲ್ಲಮಜಲ್, ಶಮೀರ್ ಶಾಂತಿಅಂಗಡಿ, ಹಮೀದ್ ಶಾಂತಿಅಂಗಡಿ ಮತ್ತಿತರರು ಇದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಪಿ.ಎ. ರಹೀಂ ಸ್ವಾಗತಿಸಿ, ನಿರೂಪಿಸಿದರು.