ಮಾಹಿತಿಗಳು ಮನುಕುಲದ ಅಭಿವೃದ್ಧಿಗೆ ಬಳಕೆಯಾಗಬೇಕು-ಡಾ. ಯು.ಪಿ. ಶಿವಾನಂದ
ಪುತ್ತೂರು, ಡಿ. 5: ವಿದ್ಯೆಯಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಆತನಿಗೆ ನಿದ್ರೆ ಮತ್ತು ಸುಖದ ಹಂಬಲವಿರಬಾರದು. ಬೆರಳ ತುದಿಯಲ್ಲೇ ಸಿಗುವ ಮಾಹಿತಿಗಳು ಮನುಕುಲದ ಅಭಿವೃದ್ಧಿಗಾಗಿ ಬಳಕೆಯಾಗಬೇಕು ಎಂದು ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಡಾ.ಯು.ಪಿ.ಶಿವಾನಂದ ಅವರು ಹೇಳಿದರು.
ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಪದವಿಪೂರ್ವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸಲಾದ ‘ ಮೊಬೈಲ್ ಆ್ಯಪ್ ವಿ-ಸಿಇಟಿ’ ಯನ್ನು ಬಿಡುಗಡೆಗೊಳಿಸಿ ಮಾತಾಡಿದರು. ಅತ್ಯಂತ ಬಡತನದಲ್ಲಿ, ರಸ್ತೆ ದೀಪದ ಬೆಳಕಿನಲ್ಲಿ ಓದಿ ಜಗತ್ಪ್ರಸಿದ್ದರಾದ ಸರ್ ಎಂ ವಿಶ್ವೇಶ್ವರಯ್ಯನವರು ನಮಗೆಲ್ಲಾ ಮಾರ್ಗದರ್ಶಕರು. ಅವರ ನಿಷ್ಠೆ ಮತ್ತು ಬದ್ಧತೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಅವರು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ, ಸಂಚಾಲಕ ರಾಧಾಕೃಷ್ಣ ಭಕ್ತ, ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್, ನಿರ್ದೇಶಕರಾದ ರವಿಕೃಷ್ಣ ಕಲ್ಲಾಜೆ, ಸುಬ್ರಮಣ್ಯ ಭಟ್.ಟಿ ಮತ್ತಿತರರು ಇದ್ದರು.
ಆ್ಯಪ್ ತಯಾರಿಸಿದ ಕಾಲೇಜಿನ ಉಪನ್ಯಾಸಕ ಪ್ರೊ.ರಾಘವೇಂದ್ರ ಕಟಗಲ್, ವಿದ್ಯಾರ್ಥಿಗಳಾದ ದ್ವಾರಕಾನಾಥ್ ಮತ್ತು ಸಂದೇಶ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಡಾ.ಪ್ರಸಾದ್.ಎನ್.ಬಾಪಟ್ ಸ್ವಾಗತಿಸಿ ಪ್ರೊ.ವಿವೇಕ್ ರಂಜನ್ ಭಂಡಾರಿ ವಂದಿಸಿದರು.