×
Ad

ವಿದ್ಯಾವಂತರಲ್ಲಿ ಅಹಂಕಾರ ಭಾವ ಎಂದಿಗೂ ಸಲ್ಲ: ಡಾ. ಎಂ. ರವಿ

Update: 2017-12-05 21:53 IST

ಕೊಣಾಜೆ, ಡಿ. 5: ವಿದ್ಯಾವಂತರಲ್ಲಿ ನಾವು ಕಲಿತಿದ್ದೇವೆ ಎಂಬ ಅಹಂಕಾರ ಸಲ್ಲದು. ದೇಶದಲ್ಲಿ ಅಕ್ಷರ ಕಲಿಯದ ಸುಮಾರು 25 ಕೋಟಿ ಜನರಿದ್ದಾರೆ. ವಿದ್ಯಾವಂತರು ಯಾವುದೇ ಕಾರಣಕ್ಕೆ ಅವಿದ್ಯಾವಂತರನ್ನು ಹಂಗಿಸಬಾರದು. ಅವರಿಗೆ ತಿಳಿಯದ ವಿಚಾರ ಕಲಿಸಿಕೊಡಬೇಕು. ಕೆಲವೊಂದು ವಿಷಯದಲ್ಲಿ ಅವರು ಹೆಚ್ಚಿನ ಜ್ಞಾನ ಸಂಪಾದಿಸಿರುತ್ತಾರೆ. ನಾವು ಅವರಿಂದ ಬಹಳಷ್ಟು ಕಲಿಯಲಿಕ್ಕಿದೆ. ಒಂದು ಮರಕ್ಕಿಂತ ಇನ್ನೊಂದು ಮರ ಎತ್ತರ ಇದೆ ಎಂಬುದನ್ನು ಯಾವುದೇ ಕಾಲಕ್ಕೂ ಮರೆಯಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಂ. ರವಿ ಅಭಿಪ್ರಾಯಪಟ್ಟರು.

 ಮುಡಿಪುವಿನಲ್ಲಿರುವ ಸೂರಜ್ ವಿದ್ಯಾಸಂಸ್ಥೆಯ ಆವರಣಲ್ಲಿ ಮಂಗಳವಾರ ನಡೆದ ಸೂರಜ್ ಶಿಕ್ಷಣ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಿ. 21ರಿಂದ 23ರ ತನಕ ಮೂರು ದಿನಗಳ ಕಾಲ ನಡೆಯಲಿರುವ ಸಮೃದ್ಧ ಭಾರತ ಸಂಸ್ಕೃತಿ ದರ್ಶನ ‘ಸೂರಜ್ ಕಲಾಸಿರಿ’-2017ರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಮೌಲ್ಯಾಧಾರಿತ ಶಿಕ್ಷಣ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿದ್ಯೆ ಎಂಬುದು ನಮಗೆ ವಿನಯ, ಸೌಜನ್ಯ, ಉಪಕಾರ ಮನೋಭಾವನೆ ಕಲಿಸಬೇಕು. ಹಾಗಿದ್ದರೆ ಮಾತ್ರ ಈ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಚೇರ್‌ಮೆನ್ ಡಾ. ಮಂಜುನಾಥ್ ಎಸ್. ರೇವಣ್ಕರ್ ಮಾತನಾಡಿ ಬದಲಾವಣೆ ಜಗದ ನಿಯಮ. ವಿದ್ಯಾರ್ಥಿ ಗಳು ತಮ್ಮ ಬದುಕನ್ನು ಸಾರ್ಥಕಗೊಳಿಸುವ ಸಲುವಾಗಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಹಾಗೆಯೇ ನೇತ್ರದಾನಕ್ಕೆ ನೋಂದಣಿ ಮಾಡಿದ ದಾನಿಗಳ ಸೇವಾ ಮನೋಭಾವನೆಯನ್ನು ಶ್ಲಾಘಿಸಿದರು.

 ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿವಾರಣೆ ಅಧಿಕಾರಿ ಡಾ. ರತ್ನಾಕರ್ ಮಾತನಾಡಿ ವ್ಯಕ್ತಿ ತಾನು ಬದುಕಿರುವಾಗ ಲಿಖಿತವಾಗಿ ದಾಖಲಿಸಿ, ಸತ್ತ ನಂತರ ದಾನ ಮಾಡುವುದು ನೇತ್ರದಾನ. ಭಾರತದಲ್ಲಿ ಪ್ರತಿ ವರ್ಷ 30ಸಾವಿರ ಜನ ಕಣ್ಣು ಕಳೆದುಕೊಳ್ಳುತ್ತಿದ್ದಾರೆ. ಅಪೌಷ್ಠಿಕತೆಯಿಂದಲೂ ಕಣ್ಣು ಕಳೆದುಕೊಳ್ಳಬಹುದು. ನಾವು ನೇತ್ರದಾನಕ್ಕೆ ಮುಂದಾದರೆ ಈ ದೇಶದಲ್ಲಿ ಕಣ್ಣು ಕಾಣಿಸದವರ ಸಮಸ್ಯೆ ಶಾಶ್ವತವಾಗಿ ನೀಗಿಸಬಹುದು ಎಂದು ಹೇಳಿದರು.

ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕಲಾಸಿರಿ ಮಾಧ್ಯಮ ಸಮಿತಿ ಅಧ್ಯಕ್ಷೆ ಮಮತಾ ಡಿ. ಎಸ್. ಗಟ್ಟಿ, ಉಪಾಧ್ಯಕ್ಷರುಗಳಾದ ಹೈದರ್ ಪರ್ತಿಪ್ಪಾಡಿ ಹಾಗೂ ಚಂದ್ರಹಾಸ ಕರ್ಕೇರ, ಸಂಘಟನಾ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಸಂಚಾಲಕ ತೋನ್ಸೆ ಪುಷ್ಕಳ ಕುಮಾರ್, ಕಾರ್ಯದರ್ಶಿ ಕೇಶವ ಹೆಗಡೆ, ಸದಸ್ಯರಾದ ಡಾ. ಸುರೇಖ ಹಾಗೂ ಲಕ್ಷ್ಮೀ ನಾರಾಯಣ ರೈ ಹರೇಕಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೂರಜ್ ಸಂಸ್ಥೆಯ ಆಧ್ಯಕ್ಷ ಡಾ. ರೇವಣ್ಕರ್, ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ ಗಣ್ಯರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ವಿರಚಿತ ತೋನ್ಸೆ ಪುಷ್ಕಳ ಕುಮಾರ್ ಸಂಗೀತ ಸಂಯೋಜಿಸಿ ಹಾಡಿರುವ ‘ಸೂರಜ್ ಕಲಾಸಿರಿ’-2017 ಶೀರ್ಷಿಕೆ ಗೀತೆ ಹಾಡಲಾಯಿತು.

ಕಲಾಸಿರಿ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಹೆಗಡೆ ಸೋಂದಾ ಸ್ವಾಗತಿಸಿದರು. ಶಿಕ್ಷಕಿ ರಶ್ಮಿ ಕೆ. ಕಾರ್ಯಕ್ರಮ ನಿರೂಪಿಸಿದರು. ಸೂರಜ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ವಿಮಲಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News