ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ
ಮಂಗಳೂರು, ಡಿ.5: ಕರ್ನಾಟಕ ಕರಾವಳಿಯಲ್ಲಿ ಒಖಿ ಚಂಡಮಾರುತದ ಅಬ್ಬರ ಮಂಗಳವಾರ ಸಣ್ಣ ಪ್ರಮಾಣದಲ್ಲಿ ಮುಂದುವರಿದಿದೆ. ಸೋಮವಾರ ರಾತ್ರಿ 11:30ಕ್ಕೆ ಹೈ ಅಲರ್ಟ್ ಅವಧಿ ಕೊನೆಗೊಂಡಿದ್ದರೂ ಕೂಡ ಮಂಗಳವಾರ ಹಗಲು ಕಾಣಿಸಿಕೊಂಡ ಹವಾಮಾನ ವೈಪರಿತ್ಯದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ 24 ಗಂಟೆಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದ.ಕ. ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆಯ ವೇಳೆಗೆ ನಗರ ಹಾಗೂ ಹೊರವಲಯದ ಹಲವು ಕಡೆ ಮಂಜುಕವಿದ ವಾತಾವರಣದ ಮಧ್ಯೆ ತುಂತುರು ಮಳೆಯಾಗಿದೆ.
ಪಣಂಬೂರು ಕಡಲ ಕಿನಾರೆಯಲ್ಲಿ ಸಂಜೆ ಐದರಿಂದ ಆರು ಗಂಟೆಯ ತನಕ ಬಿರುಸಿನ ಗಾಳಿ ಬೀಸಿದೆ. ಪಶ್ಚಿಮದಲ್ಲಿ ಮೋಡ ಮುಸುಕಿತ್ತು ಎಂದು ಬೀಚ್ ಟೂರಿಸಂ ಡೆವೆಲಪ್‌ಮೆಂಟ್ ಪ್ರೋಜೆಕ್ಟ್‌ನ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ಜಿಲ್ಲೆಯ ಹಲವು ಕಡೆ ಮೋಡ ಕವಿದ ವಾತಾವಣವಿದ್ದ ಕಾರಣ ತಾಪಮಾನದಲ್ಲಿ ಸುಮಾರು 2 ಡಿಗ್ರಿ ಸೆಲ್ಶಿಯಸ್‌ನಷ್ಟು ಇಳಿಕೆಯಾಗಿದೆ. ಒಖಿ ಚಂಡಮಾರುತದ ಪ್ರಭಾವ ಇದೀಗ ದುರ್ಬಲಗೊಂಡಿದ್ದು, ಗಂಟೆಗೆ 9 ಕಿ.ಮೀ. ವೇಗವಾಗಿ ಚಲಿಸುತ್ತಿದೆ. ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಇನ್ನೂ 3-4 ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ ಡಾ.ಸಿ.ಎನ್. ಪ್ರಭು ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉದ್ಭವಿಸಿರುವ ಮತ್ತೊಂದು ವಾಯುಭಾರ ಕುಸಿತ ಅಂಡಮಾನ್ ದ್ವೀಪದ ಭಾಗದಲ್ಲಿ ಕೇಂದ್ರೀಕೃತವಾಗಿದೆ. ಅದು ಚಂಡ ಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳು ಕಡಿಮೆ. ಬಂಗಾಳಕೊಲ್ಲಿಯ ಹೊಸ ವಾಯುಭಾರ ಕುಸಿತದಿಂದ ಕರಾವಳಿಯ ಯಾವುದೇ ಭಾಗಕ್ಕೂ ತೊಂದರೆಯಿಲ್ಲ. ಇದರಿಂದ ಆಂಧ್ರಪ್ರದೇಶ ಹಾಗೂ ರಾಜ್ಯದ ಬೆಂಗಳೂರು, ಕೋಲಾರ ಕಡೆ ಮಾತ್ರ ತುಂತುರು ಮಳೆಯಾಗಲಿದೆ ಎಂದು ಡಾ.ಸಿ.ಎನ್. ಪ್ರಭು ಹೇಳಿದ್ದಾರೆ.
ಒಖಿ ಚಂಡಮಾರುತ ವೈಪರಿತ್ಯದ ಬಗ್ಗೆ ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಪೊಲೀಸ್ ಇಲಾಖೆ, ಕೋಸ್ಟ್‌ಗಾರ್ಡ್ ಹಾಗೂ ಅಗ್ನಿಶಾಮಕ ದಳವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.