ಜೆರುಸಲೇಂ ಇಸ್ರೇಲ್ ರಾಜಧಾನಿಯಾದರೆ ಇಸ್ಲಾಮಿಕ್ ಶೃಂಗ ಸಮ್ಮೇಳನ

Update: 2017-12-05 16:34 GMT

ರಿಯಾದ್ (ಸೌದಿ ಅರೇಬಿಯ), ಡಿ. 5: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿ ಎಂಬುದಾಗಿ ಮಾನ್ಯ ಮಾಡುವ ವಿವಾದಾಸ್ಪದ ತೀರ್ಮಾನವನ್ನು ಅಮೆರಿಕ ತೆಗೆದುಕೊಂಡರೆ, ಮುಸ್ಲಿಮ್ ದೇಶಗಳ ಶೃಂಗಸಭೆಯನ್ನು ಕರೆಯುವುದಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಸೋಮವಾರ ತಿಳಿಸಿದೆ.

ಜೆರುಸಲೇಂನ ಸ್ಥಾನಮಾನಕ್ಕೆ ಸಂಬಂಧಿಸಿ ಹಲವು ವರ್ಷಗಳ ಅಮೆರಿಕ ನೀತಿಯನ್ನು ಬದಲಾಯಿಸುವ ಮಹತ್ವದ ತೀರ್ಮಾನವೊಂದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಆದರೆ, ಟ್ರಂಪ್‌ರ ಈ ಸಂಭಾವ್ಯ ನಿರ್ಧಾರಕ್ಕೆ ಫೆಲೆಸ್ತೀನ್ ಮತ್ತು ಅರಬ್ ಜಗತ್ತಿನಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗುವ ಸೂಚನೆಗಳು ಈಗಾಗಲೇ ಲಭಿಸಿವೆ.

ಸೌದಿಯ ಜಿದ್ದಾ ನಗರದಲ್ಲಿ ಸೋಮವಾರ ನಡೆದ ತುರ್ತು ಸಭೆಯೊಂದರಲ್ಲಿ 57 ಸದಸ್ಯರ ಒಐಸಿ, ಅಮೆರಿಕದ ಸಂಭಾವ್ಯ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿತು.

‘‘ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿ ಎಂಬುದಾಗಿ ಮಾನ್ಯ ಮಾಡುವ ನಿರ್ಧಾರವನ್ನು ಅಮೆರಿಕ ತೆಗೆದುಕೊಂಡರೆ, ನಾವು ಮೊದಲು ವಿದೇಶ ಸಚಿವರ ಮಟ್ಟದ ಸಭೆಯೊಂದನ್ನು ಏರ್ಪಡಿಸುತ್ತೇವೆ ಹಾಗೂ ಬಳಿಕ ಅತಿ ಶೀಘ್ರದಲ್ಲಿ ಇಸ್ಲಾಮಿಕ್ ಶೃಂಗ ಸಮ್ಮೇಳನವೊಂದನ್ನು ನಡೆಸುತ್ತೇವೆ’’ ಎಂದು ಹೇಳಿಕೆಯೊಂದರಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ ತಿಳಿಸಿದೆ.

‘‘ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವುದು ಅಥವಾ ವಿವಾದಾಸ್ಪದ ನಗರದಲ್ಲಿ ರಾಜತಾಂತ್ರಿಕ ಕಚೇರಿಯನ್ನು ಸ್ಥಾಪಿಸುವುದನ್ನು ‘ಅರಬ್ ಮತ್ತು ಇಸ್ಲಾಮಿಕ್ ದೇಶಗಳ ಮೇಲೆ ನಡೆದ ಸ್ಪಷ್ಟ ದಾಳಿ ಎಂಬುದಾಗಿ ಪರಿಗಣಿಸಲಾಗುವುದು’’ ಎಂದು ಸಂಘಟನೆ ಎಚ್ಚರಿಸಿದೆ.

ನಿರ್ಧಾರ ಮುಂದೂಡಿದ ಟ್ರಂಪ್

ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವ ಸಂಭಾವ್ಯ ನಿರ್ಧಾರಕ್ಕೆ ವ್ಯಾಪಕ ಜಾಗತಿಕ ಪ್ರತಿಭಟನೆ ವ್ಯಕ್ತವಾಗುತ್ತಿರುವಂತೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡಿದ್ದಾರೆ.

 48 ಗಂಟೆಗಳ ಅವಧಿಯಲ್ಲಿ ಮಿತ್ರ ದೇಶಗಳಿಂದ ಬಂದ ಸಾರ್ವಜನಿಕ ಎಚ್ಚರಿಕೆಗಳು ಹಾಗೂ ವಿಶ್ವ ನಾಯಕರ ನಡುವಿನ ಖಾಸಗಿ ಫೋನ್ ಕರೆಗಳ ಹಿನ್ನೆಲೆಯಲ್ಲಿ, ಅಮೆರಿಕದ ರಾಜತಾಂತ್ರಿಕ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸಲು ತೆಗೆದುಕೊಳ್ಳುವ ನಿರ್ಧಾರವನ್ನು ಟ್ರಂಪ್ ಮುಂದೂಡಲು ಬಯಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News