ಕಾರ್ಮಿಕ ಕಲ್ಯಾಣ ಸೌಲಭ್ಯಕ್ಕೆ ಮಾಹಿತಿ ನೀಡಿ: ಬೀಡಿ ಕಾರ್ಮಿಕರಿಗೆ ಮನವಿ
ಉಡುಪಿ, ಡಿ.5: ಬೀಡಿ ಕಾರ್ಮಿಕರು ತಮ್ಮ ಗುರುತಿನ ಚೀಟಿ ನೊಂದಾಯಿಸಿ, ಸಮಗ್ರ ಮಾಹಿತಿಯೊಂದಿಗೆ ತಮ್ಮ ಸಮೀಪದ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಆಸ್ಪತ್ರೆಗೆ ಸಲ್ಲಿಸಲು ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆ ಪ್ರಕಟನೆ ತಿಳಿಸಿದೆ.
ಇಲಾಖೆ ರಾಜ್ಯಾದ್ಯಂತ ಸಕ್ರಿಯ ಬೀಡಿ ಕಾರ್ಮಿಕರ ನೋಂದಣಿ ಮತ್ತು ಮಾಹಿತಿ ಸಂಗ್ರಹ ಆರಂಭಿಸಿದ್ದು, ನಿಗದಿತ ನಮೂನೆ ಹಾಗೂ ಮಾಹಿತಿಯನ್ನು ಈಗಾಗಲೇ ಬೀಡಿ ತಯಾರಿಕಾ ಸಂಸ್ಥೆಗೆ ನೀಡಲಾಗಿದೆ. ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಈ ಮಾಹಿತಿಯನ್ನು ಒದಗಿಸಬೇಕು ಎಂದು ಪ್ರಕಟನೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.
ಮಾಹಿತಿ ಒದಗಿಸಿದ ಕಾರ್ಮಿಕರಿಗಷ್ಟೆ ಕಲ್ಯಾಣ ಕಾರ್ಯಕ್ರಮಗಳ ಲಾಭ ದೊರೆಯಲಿದೆ. ಪ್ರಸ್ತುತ ಬೀಡಿ ಕಾರ್ಮಿಕರ ಆಸ್ಪತ್ರೆಗಳು ಕಾರ್ಕಳ, ಉಡುಪಿ, ಮೂಡಬಿದ್ರೆ, ಪಡೀಲ್, ಕೈಕಂಬ, ತೊಂಬೆ, ದೇರಳಕಟ್ಟೆ, ಕಾಟಿಪಳ್ಳ, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಹಾಗೂ ವಾಮಪದವಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-23471606ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.