ಬಂಟ್ವಾಳ ತಾ.ಪಂ.ನ ಮಾಸಿಕ ಪ್ರಗತಿ ಪರಿಶೀಲನಾ ಸಭೆ
ಬಂಟ್ವಾಳ, ಡಿ. 6: ಈ ಹಿಂದೆ ತಾಲೂಕು ಪಂಚಾಯತ್‍ನ ಆರ್.ಟಿ.ಸಿ. ಅಧ್ಯಕ್ಷರ ಹೆಸರಿನಲ್ಲಿತ್ತು. ಅದನ್ನು ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿಗೆ ಬದಲಾಯಿಸುವಂತೆ ಅರ್ಜಿ ಕೊಟ್ಟು ಐದಾರು ತಿಂಗಳಾದರೂ, ಈವರೆಗೂ ಈ ಪ್ರಕ್ರಿಯೆ ಆಗಿಲ್ಲ. ಯಾಕೆ? ಎಂದು ಕಂದಾಯ ಇಲಾಖೆಯ ಅಧಿಕಾರಿಯ ವಿರುದ್ಧವೇ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಂದಾ ಗರಂ ಆದ ಘಟನೆ ಮಂಗಳವಾರ ನಡೆದ ಬಂಟ್ವಾಳ ತಾ.ಪಂ.ನ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಪಂಗೆ ಮಂಜೂರಾದ ಸ್ಥಳಗಳ ಕುರಿತ ಆರ್.ಟಿ.ಸಿ.ಗಾಗಿ ಅರ್ಜಿ ಸಲ್ಲಿಸಿದ್ದು, ಹೆಸರು ಬದಲಾವಣೆಯಾಗಿ ಇನ್ನೂ ಕೂಡಾ ಬಂದಿಲ್ಲ. ಅರ್ಜಿ ಕೊಟ್ಟು ಐದು ತಿಂಗಳಾಯಿತು. ಈ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಕಂದಾಯ ನಿರೀಕ್ಷಕರನ್ನು ಇಒ ಮಿರಾಂದ ಅವರು ಪ್ರಶ್ನಿಸಿದಾಗ, ಅದನ್ನು ಪರಿಶೀಲಿಸುವುದಾಗಿ ಕಂದಾಯ ಇಲಾಖೆ ಅಧಿಕಾರಿ ಉತ್ತರಿಸಿದರು.
ಕುಡಿಯುವ ನೀರಿನ ವಿತರಣೆಗೆ ಸಂಬಂಧಿಸಿ ಇರುವ ಪಂಪ್‍ಸೆಟ್‍ಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಐದು ಗ್ರಾಪಂಗಳು ತೆಗೆದುಕೊಂಡಿದ್ದು, ಇನ್ನೂ ಸ್ಥಿರಗೊಳಿಸಿಲ್ಲ. ಆದರೆ ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ ಮಾಡದಿರಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಇಒ ಸೂಚಿಸಿದರು.
ಅಂಗನವಾಡಿಗಳಿಗೆ ತಿಂಗಳ ಬಿಲ್ ಅನ್ನು ಆಯಾ ತಿಂಗಳೇ ನೀಡಬೇಕು ಎಂದು ಹೇಳಿದ ಅವರು, ಈ ಕುರಿತು ದೂರುಗಳು ಬಾರದಂತೆ ಗಮನಹರಿಸಲು ಸೂಚಿಸಿದರು.
ಕೊಡ್ಮಣ್, ಫರಂಗಿಪೇಟೆ, ಮೇರೆಮಜಲುಗಳಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿ ಇಂಟರ್ ನೆಟ್ ಸಮಸ್ಯೆ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.ಈ ಸಂದರ್ಭ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾವಾರು ಮಾಹಿತಿಯನ್ನು ನೀಡಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ ಸಹಿತ ನಾನಾ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.