ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಮಾಂಕಾಳ್ ಅಭ್ಯರ್ಥಿ : ಸಿಎಂ ಗ್ರೀನ್ ಸಿಗ್ನಲ್
ಭಟ್ಕಳ,ಡಿ.6: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗಾಗಿ 1200 ರೂ. ಕೋಟಿ ಅನುದಾನ ಪಡೆದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಂಕಾಳ್ ವೈದ್ಯರೇ ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂಬ ಗ್ರೀನ್ ಸಿಗ್ನಲ್ ಮುಖ್ಯಮಂತ್ರಿಗಳು ಬುಧವಾರ ಭಟ್ಕಳದಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭದಲ್ಲಿ ನೀಡಿದರು.
ತಮ್ಮ ಉದ್ಘಾಟನಾ ಭಾಷಣದುದ್ದಕ್ಕೂ ಮಾಂಕಾಳ್ ವೈದ್ಯರ ಪ್ರಮಾಣಿಕತೆ, ಕ್ರೀಯಶೀಲತೆಯನ್ನು ಹೊಗಳಿದ ಮುಖ್ಯಮಂತ್ರಿ ಇಂತಹ ವ್ಯಕ್ತಿ ಮುಂದಿನ ಚುನಾವಣೆಗೆ ನಿಮಗೆ ಬೇಕಾ ಎಂದು ಸಭಿಕರನ್ನು ಪ್ರಶ್ನಿಸಿದರು.
ಭಟ್ಕಳದ ಈ ದಿನ ಸುವಾರ್ಣಾಕ್ಷರಗಳಿಂದ ಬರೆದಿಡುವ ದಿನವಾಗಿದ್ದು ಇಷ್ಟೊಂದು ದೊಡ್ಡಪ್ರಮಾಣದ ಅನುದಾನ ಬಹುಶ ಯಾವುದೇ ಶಾಸಕರೂ ತಂದಿಲ್ಲ. ಯಾವಾಗಲೂ ಕ್ಷೇತ್ರದ ಅಭಿವೃದ್ಧಿಯ ಕುರಿತು ಚಿಂತಿಸುವ ಶಾಸಕರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಇಂತಹ ವ್ಯಕ್ತಿಗೆ ನಿಮ್ಮ ಆಶೀರ್ವಾದ ಇರಲಿ ಎಂದು ಹಾರೈಸಿದ ಅವರು ಕಡಿಮೆ ಮಾತು ಹೆಚ್ಚು ದುಡಿಮೆ ಎನ್ನುವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಮಾಂಕಾಳ್ ವೈದ್ಯರು ಪ್ರತಿಬಾರಿಯೂ ಹತ್ತಿಪ್ಪತ್ತು ಅರ್ಜಿಗಳನ್ನು ಹಿಡಿದುಕೊಂಡು ಬರುತ್ತಾರೆ ಇಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಇವರು ಸದಾ ಕ್ಷೇತ್ರದ ಅಭಿವೃದ್ಧಿಯನ್ನು ಬಯಸುವವ ಕೆಲವೇ ಶಾಸಕರಲ್ಲಿ ಮಾಂಕಾಳು ವೈದ್ಯರು ಒಬ್ಬರು ಎಂದು ಮುಖ್ಯಮಂತ್ರಿ ಹೇಳಿದರು.