×
Ad

ಜನಸಂಪರ್ಕ ಸಭೆಯ ದೂರುಗಳಿಗೆ ಪ್ರಥಮ ಆದ್ಯತೆ:ಅಧೀಕ್ಷಕ ಇಂಜಿನಿಯರ್

Update: 2017-12-06 20:49 IST

ಪುತ್ತೂರು,ಡಿ.6: ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಂಡಿಸಲಾದ ದೂರುಗಳಿಗೆ ಪ್ರಥಮ ಆಧ್ಯತೆಯನ್ನು ನೀಡಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಮೆಸ್ಕಾಂನಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮೆಸ್ಕಾಂ ಆಧೀಕ್ಷಕ ಇಂಜಿನಿಯರ್ ಮಂಜಪ್ಪ ಅವರು ಭರವಸೆ ನೀಡಿದರು.

ಮೆಸ್ಕಾಂ ಜನಸಂಪರ್ಕ ಸಭೆ ಬುಧವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಮೆಸ್ಕಾಂ ಆಧೀಕ್ಷಕ ಇಂಜಿನಿಯರ್ ಮಂಜಪ್ಪ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಪರಿವರ್ತಕ ಅಳವಡಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರುಗಳನ್ನು ನೀಡಿದರು. ತಾಲೂಕಿನ ಅತ್ತಾಜೆ, ಪುಣ್ಚಪ್ಪಾಡಿ, ಕನ್ಯಾಮಂಗಲ, ಪಾಣಾಜೆ, ಪುಳಿತ್ತಡಿ, ಕೊಳ್ತಿಗೆಯ ಕಟ್ಟಪುಣಿ ಮತ್ತಿತರ ಕಡೆಗಳಲ್ಲಿ ಪರಿವರ್ತಕಗಳನ್ನು ಅಳವಡಿಸುವಂತೆ ಬೇಡಿಕೆಗಳನ್ನು ನೀಡಲಾಯಿತು. 

ಹಿರೇಬಂಡಾಡಿಯ ನೆಕ್ಕಿಲು ಎಂಬಲ್ಲಿ ಪರಿವರ್ತಕ ಕಾಮಗಾರಿಗಾಗಿ ಹೊಂಡಗಳನ್ನು ತೆಗೆದು ಹೋಗಿರುವ ಗುತ್ತಿಗೆದಾರನ ಪತ್ತೆಯೇ ಇಲ್ಲ. ಇಲಾಖೆಯಲ್ಲಿ ಕೇಳಿದರೆ ಅಧಿಕಾರಿಗಳಿಂದ ಸೌಜನ್ಯದ ಮಾತುಗಳು ಸಿಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಅಧೀಕ್ಷಕರು ಒಂದು ವಾರದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಬಳಿಕದ ವಾರದಲ್ಲಿ ಸಂಪರ್ಕ ನೀಡುವುದಾಗಿ ತಿಳಿಸಿದರು. ಇದೇ ಪ್ರದೇಶದ ಪುಳಿತ್ತಡಿ ಎಂಬಲ್ಲಿ ಪರಿವರ್ತಕವಿಲ್ಲದೆ ಕೃಷಿಕರಿಗೆ ತೊಂದರೆಯಾಗಿದ್ದು, ಇಲ್ಲಿನ ಜನರು ಹಲವು ಸಮಯಗಳಿಂದ ಪರಿವರ್ತಕ ಅಳವಡಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಈ ತನಕ ಕ್ರಮ ಕೈಗೊಂಡಿಲ್ಲ ಎಂದು ಸೇಸಪ್ಪ ನೆಕ್ಕಿಲು ಆರೋಪಿಸಿದರು. 

ಕಡಬ ಸಮೀಪದ ಕೆಡೆಂಜಿ ಎಂಬಲ್ಲಿ ಎಚ್‍ಟಿ ವಿದ್ಯುತ್ ತಂತಿ ತೋಟದೊಳಗೆ ಹಾದು ಹೋಗಿದ್ದು ಅಪಾಯದ ಸ್ಥಿತಿಯಿದೆ. ಈಬಗ್ಗೆ ಪರಿಶೀಲನೆ ನಡೆಸಿ ದಾರಿಯನ್ನು ಬದಲಾಯಿಸುವಂತೆ ಜಯಾನಂದ ಕಡೆಂಜಿ ಅವರು ತಿಳಿಸಿದರು. ಈ ಬಗ್ಗೆ ಕಾರ್ಯನಿರ್ವಾಹಕ ಅಭಿಯಂತರರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಉಪ್ಪಿನಂಗಡಿ ವ್ಯಾಪ್ತಿಗೆ ಪ್ರತ್ಯೇಕ ಉಪವಿಭಾಗವನ್ನು ಸ್ಥಾಪಿಸುವಂತೆ ತಾ.ಪಂ. ಸದಸ್ಯೆ ಜಯಂತಿ ಆರ್ ಗೌಡ ಆಗ್ರಹಿಸಿದರು. ದೀನ್ ದಯಾಳ್ ಯೋಜನೆಯ ಅನುಷ್ಠಾನದಲ್ಲಿ ವಿಳಂಭವಾಗುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಅವರು ಒತ್ತಾಯಿಸಿದರು. ದೀನ್‍ದಯಾಳ್ ಯೋಜನೆಯ ಕಾಮಗಾರಿಗೆ ಸಂಬಂಧಸಿ ಈಗಾಗಲೇ ಸಮೀಕ್ಷಾ ಕಾರ್ಯ ನಡೆಸಲಾಗಿದ್ದು, ಕಾಮಗಾರಿ ಪ್ರಾರಂಬಿಕ ಹಂತದಲ್ಲಿದೆ ಎಂದು ಅಧೀಕ್ಷಕರು ಉತ್ತರಿಸಿದರು. 

ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಪರಿವರ್ತಕ ಮತ್ತು ವಿದ್ಯುತ್ ತಂತಿ ತೀರಾ ಹಳತಾಗಿದ್ದು, ಕಳೆದ 40-50 ವರ್ಷಗಳಿಂದ ಬದಲಾಯಿಸಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಬದಲಾವಣೆಗೊಳಿಸುವಂತೆ ವೆಂಕಟ್ರಮಣ ಘಾಟೆ, ಬಾಬು ರೈ, ಲೋಕನಾಥ ಬಯಂಬಾಡಿ ಮತ್ತಿತರರು ಆಗ್ರಹಿಸಿದರು. ಈ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸುವುದಾಗಿ ಅಧೀಕ್ಷಕರು ಭರವಸೆ ನೀಡಿದರು. 

ಸವಣೂರು ಬಳಿಯಲ್ಲಿನ ಅಂಗನವಾಡಿಯ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅಪಾಯದ ಸ್ಥಿತಿಯಿದೆ. ಈ ತಂತಿಯನ್ನು ಇಲ್ಲಿಂದ ಸ್ಥಳಾಂತರಿಸಿ ಅಳವಡಿಸಬೇಕು ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಹೇಳಿದರು. ಈ ಬಗ್ಗೆ 15 ದಿನಗಳ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಅಧೀಕ್ಷಕರು ತಿಳಿಸಿದರು. 

ಮೆಸ್ಕಾಂ ಸಲಹಾ ಸಮಿತಿಯಲ್ಲಿನ ನಿರ್ಣಯಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಸಲಹಾ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಅಧೀಕ್ಷಕರು ತಾಲೂಕು ಮಟ್ಟದ ಸಲಹಾ ಸಮಿತಿಯಲ್ಲಿ ಶಾಸಕರು ಅಧ್ಯಕ್ಷರಾಗಿದ್ದಾರೆ. ಶಾಖಾ ಮಟ್ಟದ ಸಲಹಾ ಸಮಿತಿಗೆ ಅಭಿಯಂತರರು ಅಧ್ಯಕ್ಷರಾಗಿದ್ದಾರೆ. 3 ತಿಂಗಳಿಗೊಮ್ಮೆ ನಡೆಯುವ ಸಲಹಾ ಸಮಿತಿ ಸಭೆಯ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿದೆ ಎಂದು ತಿಳಿಸಿದರು. 

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಪೂಜಾರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News