ಜನರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಸಿಪಿಐ ಸಮ್ಮೇಳನದಲ್ಲಿ ಡಾ.ಬಿ. ಶೀ ನಿವಾಸ ಕಕ್ಕಿಲ್ಲಾಯ ಕರೆ

Update: 2017-12-06 16:41 GMT

ಮಂಗಳೂರು, ಡಿ.6: ನಮ್ಮನ್ನಾಳುತ್ತಿರುವ ಸರಕಾರಗಳು ಧಾರ್ಮಿಕ ವಿಚಾರಗಳಿಗೆ ಒತ್ತು ಕೊಡುತ್ತಿವೆ. ಜಾತಿ ಮತ ಪಂಗಡಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುತ್ತಿದೆ. ಓಟ್‌ ಬ್ಯಾಂಕ್‌ಗಾಗಿ ಈ ರೀತಿಯಾಗಿ ಜನರ ಜೀವಿಸುವ ಹಕ್ಕುಗಳನ್ನು ಸರಕಾರ ಹರಣ ಮಾಡುತ್ತಿದೆ. ಅಭಿವೃದಿಯ ಹೆಸರಿನಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ಮರೆಮಾಚಿ ಧಾರ್ಮಿಕ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಈ ಎಲ್ಲಾ ಅನಾಚಾರದಿಂದ ಮುಕ್ತಿ ಸಿಕ್ಕಿ ನಿಜವಾದ ದಿಕ್ಕಿನಲ್ಲಿ ದೇಶ ಅಭಿವೃದ್ಧಿಯಾಗಬೇಕಾದರೆ ಜನರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಸುಪ್ರಸಿದ್ದ ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕರೆ ನೀಡಿದರು.

ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ವತಿಯಿಂದ ನಗರದ ಕೆಬಿಇಎ ಸಭಾಂಗಣದ ಕಾಮ್ರೆಡ್ ಉರ್ವ ನಾಗರಾಜ ಶೆಟ್ಟಿ ವೇದಿಕೆಯಲ್ಲಿ ನಡೆದ ಮಂಗಳೂರು ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನೋಟು ಅಮಾನ್ಯಕರಣದಿಂದ ಜನರು ತನ್ನ ದುಡಿತದ ಹಣವನ್ನು ಬ್ಯಾಂಕಿಗೆ ಕಟ್ಟಲು ಸರದಿ ಸಾಲಿನಲ್ಲಿ ನಿಂತಾದ ಅವರನ್ನು ಕಪ್ಪು ಹಣದವರೆಂದು ಬಿಂಬಿಸಲಾಯಿತು. ಜಿಎಸ್‌ಟಿ ಜಾರಿ ಮಾಡಿದಾಗಲೂ ವ್ಯಾಪಾರಸ್ಥರು, ಉದ್ಯಮಿಗಳನ್ನು ಸಂಶಯದಿಂದ ನೋಡುವಂತಾಯಿತು. ಪೂರ್ವತಯಾರಿ, ದೂರಾಲೋಚನೆ, ಜನಪರ ಕಾಳಜಿ ಹಾಗೂ ವೈಜ್ಞಾನಿಕ ಮನೋಭಾವದ ಕೊರತೆ ಈ ಯೋಜನೆಗಳು ಫಲವಾಗಿರುವುದಕ್ಕೆ ಕಾರಣವಾಗಿದೆ. ಭಾರತೀಯರು ವೈಜ್ಞಾನಿಕವಾಗಿ ಆಲೋಚಿಸಿ ಕಾರ್ಯಪ್ರವೃತ್ತರಾದರೆ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂದು ಡಾ. ಕಕ್ಕಿಲ್ಲಾಯ ಅಭಿಮತ ವ್ಯಕ್ತಪಡಿಸಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ. ಭಟ್ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಸಹಾಯಕ ಕಾರ್ಯದರ್ಶಿ ಬಿ. ಶೇಖರ್, ಕೋಶಾಧಿಕಾರಿ ಎ.ಪಿ.ರಾವ್, ಎಂ. ಕರುಣಾಕರ್ ಮಾತನಾಡಿದರು. ಜಿಲ್ಲಾ ನಾಯಕರಾದ ವಸಂತಿ ಆರ್.ಶೆಟ್ಟಿ, ಕಲ್ಯಾಣಿ ಕೊಟ್ಟಾರ ಉಪಸ್ಥಿತರಿದ್ದರು.

ಪ್ರತಿನಿಧಿ ಸಮಾವೇಶದಲ್ಲಿ ಚಟುವಟಿಕಾ ಮತ್ತು ಸಂಘಟನಾ ವರದಿಗಳನ್ನು ತಾಲೂಕು ಕಾರ್ಯದರ್ಶಿ . ಎಸ್. ಬೇರಿಂಜ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಚಿತ್ರಾಕ್ಷಿ ಕುಂಜತ್‌ಬೈಲ್ ಮಂಡಿಸಿದರು. ಪರಿಪೂರ್ಣ ಚರ್ಚೆಯ ನಂತರ ವರದಿ ಮತ್ತು ಲೆಕ್ಕಪತ್ರಗಳನ್ನು ಸಮ್ಮೇಳನ ಸರ್ವಾನುಮತದಿಂದ ಅಂಗೀಕರಿಸಿತು. ಜನರ ಮೂಲಭೂತ ಸಮಸ್ಯ ಮತ್ತು ಬೇಡಿಕೆಗಳಿಗೆ ಪೂರಕವಾಗಿ ಕಲವೊಂದು ಠರಾವುಗಳನ್ನು ತಿಮ್ಮಪ್ಪ ಕಾವೂರು ಮಂಡಿಸಿದರು.

ಈ ಸಂದರ್ಭದಲ್ಲಿ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು. ಕಾರ್ಯದರ್ಶಿಯಾಗಿ . ಎಸ್. ಬೇರಿಂಜ, ಜೊತೆ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕಾವೂರು, ಎಂ. ಕರುಣಾಕರ್ ಹಾಗೂ ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಕುಂಜತ್ತ್ ಬೈಲ್ ಆಯ್ಕೆಯಾದರು. ಸುಧಾಕರ್ ಕಲ್ಲೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News