ಬಾಬರಿ ಮಸೀದಿ ಪ್ರಕರಣ: ಸುನ್ನಿ ವಕ್ಫ್ ಮಂಡಳಿಗೆ ಪ್ರಧಾನಿ ಶ್ಲಾಘನೆ

Update: 2017-12-06 16:58 GMT

ಹೊಸದಿಲ್ಲಿ, ಡಿ.6: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಸುನ್ನಿ ವಕ್ಫ್ ಮಂಡಳಿ ಪರ ವಾದಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಹೇಳಿಕೆಯ ಕುರಿತು ಸುನ್ನಿ ವಕ್ಫ್ ಮಂಡಳಿಯ ನಿಲುವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಕಪಿಲ್ ಸಿಬಲ್‌ಜಿ ಅವರ ಹೇಳಿಕೆಯಿಂದ ದೂರ ಉಳಿದಿರುವುದಕ್ಕಾಗಿ ಮತ್ತು ಪ್ರಕರಣದ ಕುರಿತು ಕೆಚ್ಚೆದೆಯ ನಿಲುವು ತಳೆದಿರುವ ಸುನ್ನಿ ವಕ್ಫ್ ಮಂಡಳಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

   ಅಯೋಧ್ಯೆ ವಿವಾದದ ಕುರಿತ ವಿಚಾರಣೆಯನ್ನು 2019ರ ಜುಲೈವರೆಗೆ ಮುಂದೂಡಬೇಕೆಂದು ಸಿಬಲ್ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸುನ್ನಿ ವಕ್ಫ್ ಮಂಡಳಿಯ ಹಾಜಿ ಮೆಹಬೂಬ್ ಅವರು, ಕಪಿಲ್ ಸಿಬಲ್ ವಕ್ಫ್ ಮಂಡಳಿಯನ್ನು ಪ್ರತಿನಿಧಿಸುವ ವಕೀಲರಾಗಿದ್ದರೂ ಅವರ ಹೇಳಿಕೆಗೆ ನಮ್ಮ ಸಹಮತವಿಲ್ಲ. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿಲ್ಲ ಮತ್ತು ನಾವು ರಾಜಕಾರಣ ಮಾಡುತ್ತಿಲ್ಲ. ದೇಶದಲ್ಲಿರುವ ಪ್ರತಿಯೊಬ್ಬ ಹಿಂದೂ ಮತ್ತು ಮುಸ್ಲಿಮರೂ ಈ ವಿವಾದಕ್ಕೆ ಶೀಘ್ರದಲ್ಲಿ ಪರಿಹಾರ ದೊರೆಯಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದ್ದರು.

  ನಮ್ಮ ವಕೀಲರಾದ ಕಪಿಲ್ ಸಿಬಲ್ ರಾಜಕೀಯ ಪಕ್ಷದ ಜತೆ ಸಂಬಂಧ ಹೊಂದಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ಅವರು ನೀಡಿದ ಹೇಳಿಕೆ ಸರಿಯಲ್ಲ. ಅಯೋಧ್ಯೆ ವಿವಾದ ಅತೀ ಶೀಘ್ರ ಬಗೆಹರಿಯಬೇಕೆಂದು ನಾವು ಬಯಸುತ್ತಿದ್ದೇವೆ ಎಂದು ಹಾಜಿ ಮೆಹಬೂಬ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News