×
Ad

ಡಿ.10ರಂದು ತುಮಕೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶ

Update: 2017-12-07 18:45 IST

ಮಂಗಳೂರು, ಡಿ. 7: ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಡಿ.10ರಂದು ತುಮಕೂರಿನ ಸರಕಾರಿ ಶಾಲಾ ಮೈದಾನದಲ್ಲಿ ಬೃಹತ್ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಎಂ.ಕೆ. ಅಬ್ದುಲ್ ಖಾದರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಸುಮಾರು ಮೂರು ಲಕ್ಷ ಜೆಡಿಎಸ್ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಿಂದ ಸುಮಾರು 10 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ತಕ್ಕ ಪಾಠವನ್ನು ಕಲಿಸಲಿದೆ ಎಂದರು.

ಚುನಾವಣೆ ಸಮೀಪಿಸುವಾಗ ಕಾಂಗ್ರೆಸ್‌ನಿಂದ ‘ಸಾಮರಸ್ಯದ ನಡಿಗೆ’

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ‘ಸಾಮರಸ್ಯದ ನಡಿಗೆ’ಯ ನೆನಪಾಗಿದೆ ಎಂದು ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವ್ಯಂಗ್ಯವಾಡಿದರು.

ನಾಲ್ಕೂವರೆ ವರ್ಷ ಅಧಿಕಾರದಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಸಾಮರಸ್ಯದ ನಡಿಗೆಗೆ ಮುಂದಾಗಿದ್ದು ನಾಚಿಕೆಗೇಡಿನ ವಿಚಾರ. ರಾಜ್ಯದಲ್ಲಿ ಅವರದ್ದೇ ಸರಕಾರ ಇರುವಾಗ ‘ಸಾಮರಸ್ಯ ನಡಿಗೆ’ ಹಮ್ಮಿಕೊಂಡಿರುವುದರಲ್ಲಿ ಅರ್ಥವಿಲ್ಲ. ದ.ಕ. ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡುವವರ ಮೇಲೆ ಪ್ರಕರಣ ದಾಖಲಿಸಲು ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್ ಅವರಿಗೆ ಸಾಮರ್ಥ್ಯ ಇಲ್ಲ ಎಂದರು.

ಈ ಹಿಂದೆ ಜೆಡಿಎಸ್ ಸಾಮರಸ್ಯ ನಡಿಗೆಗೆ ಮುಂದಾದಾಗ ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್ ಅವಕಾಶ ಕಲ್ಪಿಸದೆ ತಡೆಯೊಡ್ಡಿದ್ದರು. ಇದೀಗ ರಾಜಕೀಯಕ್ಕೋಸ್ಕರ ಸಾಮರಸ್ಯದ ನಡಿಗೆಯನ್ನು ನೆಪವಾಗಿಸಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ, ಜೆಡಿಎಸ್ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಝಲ್, ವಿದ್ಯಾರ್ಥಿ ಜನತಾದಳದ ಜಿಲ್ಲಾಧ್ಯಕ್ಷ ಸಿನಾನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News