ಚೀನಾ ವಾಯುಪ್ರದೇಶ ಪ್ರವೇಶಿಸಿದ ಭಾರತದ ಡ್ರೋನ್
ಹೊಸದಿಲ್ಲಿ, ಡಿ.7: ಭಾರತದ ಡ್ರೋನ್ ಚೀನಾದ ವಾಯುಪ್ರದೇಶವನ್ನು ಅತಿಕ್ರಮ ಪ್ರವೇಶಿಸಿದ್ದು ಚೀನಾದ ಪ್ರಾದೇಶಿಕ ಸಾರ್ವಭೌಮತೆಯನ್ನು ಭಾರತ ಉಲ್ಲಂಘಿಸಿದೆ ಎಂಬ ಚೀನಾದ ಆಕ್ಷೇಪವನ್ನು ತಳ್ಳಿಹಾಕಿರುವ ಭಾರತ, ತಾಂತ್ರಿಕ ಕಾರಣದಿಂದ ಈ ಘಟನೆ ನಡೆದಿರುವುದಾಗಿ ತಿಳಿಸಿದೆ.
ಮಾನವರಹಿತ ವೈಮಾನಿಕ ವಾಹನವೊಂದು ದೈನಂದಿನ ತರಬೇತಿ ಕಾರ್ಯಕ್ರಮದಂತೆ ಭಾರತೀಯ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ಕಾರಣಗಳಿಂದ ಗ್ರೌಂಡ್ ಕಂಟ್ರೋಲ್ ವ್ಯವಸ್ಥೆಯ ನಿಯಂತ್ರಣ ಕಳೆದುಕೊಂಡು ಸಿಕ್ಕಿಂ ವಲಯದಲ್ಲಿ ವಾಸ್ತವಿಕ ನಿಯಂತ್ರಣಾ ರೇಖೆಯನ್ನು ದಾಟಿ ಚೀನಾದ ವಾಯುಪ್ರದೇಶ ಪ್ರವೇಶಿಸಿದೆ ಎಂದು ರಕ್ಷಣಾ ಇಲಾಖೆ ಗುರುವಾರ ತಿಳಿಸಿದೆ.
ಭಾರತದ ಗಡಿಭದ್ರತಾ ಪಡೆಯವರು ತಕ್ಷಣ ಈ ಬಗ್ಗೆ ಚೀನಾದ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಡ್ರೋನ್ ಇರುವ ಸ್ಥಳದ ವಿವರ ನೀಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಶಿಷ್ಟಾಚಾರದಂತೆ ವಿಚಾರಣೆ ನಡೆಯುತ್ತಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಆಕ್ಷೇಪ: ಈ ಮಧ್ಯೆ, ಘಟನೆಯ ಬಗ್ಗೆ ಚೀನಾದ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಹಸ್ಯ ಪ್ರದೇಶದಿಂದ ಹಾರಿ ಬಂದ ಡ್ರೋನ್ ಚೀನಾದ ವಾಯುಪ್ರದೇಶವನ್ನು ಅತಿಕ್ರಮಿಸಿದೆ. ಭಾರತದ ಈ ನಡೆ ಚೀನಾದ ಪ್ರಾದೇಶಿಕ ಸಾರ್ವಭೌಮತ್ವದ ಉಲ್ಲಂಘನೆಯಾಗಿದ್ದು ಈ ಘಟನೆಯನ್ನು ವಿರೋಧಿಸಿ ಭಾರತಕ್ಕೆ ತೀವ್ರ ಆಕ್ಷೇಪ ಸೂಚಿಸಲಾಗಿದೆ. ಚೀನಾದ ರಾಷ್ಟ್ರೀಯ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳುವ ನಮ್ಮ ಜವಾಬ್ದಾರಿ ಮತ್ತು ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ ಎಂದು ಚೀನಾದ ಸೇನಾಪಡೆಯ ಪಶ್ಚಿಮ ಕಮಾಂಡ್‌ನ ಉಪಾಧ್ಯಕ್ಷ ಝಾಂಗ್ ಶುಯ್ಲಿ ತಿಳಿಸಿದ್ದಾರೆ.