ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ‘ತೀರಾ ನಾಚಿಕೆಗೇಡಿನ ಕೃತ್ಯ’: ಬ್ರಿಟನ್

Update: 2017-12-07 15:20 GMT

ಲಂಡನ್, ಡಿ.7: 1919ರ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಅಧಿಕೃತವಾಗಿ ಕ್ಷಮೆ ಯಾಚಿಸಬೇಕೆಂಬ ಲಂಡನ್ ಮೇಯರ್ ಸಾದಿಕ್ ಖಾನ್ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಬ್ರಿಟನ್, ಬ್ರಿಟಿಷ್ ಇತಿಹಾಸದಲ್ಲಿ ಈ ಹಿಂದೆ ನಡೆದ ‘ತೀರಾ ನಾಚಿಕೆಗೇಡಿನ ಕೃತ್ಯ’ವನ್ನು ಸರಕಾರ ಯೋಗ್ಯ ರೀತಿಯಲ್ಲಿ ಖಂಡಿಸಿದೆ ಎಂದು ತಿಳಿಸಿದೆ.

ಬುಧವಾರ ಅಮೃತಸರಕ್ಕೆ ಭೇಟಿ ನೀಡಿದ್ದ ಖಾನ್, ಭಾರತದ ಇತಿಹಾಸದಲ್ಲಿ ಘಟಿಸಿರುವ ಅತ್ಯಂತ ಭೀಕರ ಘಟನೆಗಳಲ್ಲಿ ಒಂದಾಗಿರುವ ಸಾಮೂಹಿಕ ಹತ್ಯಾಕಾಂಡದ ಬಗ್ಗೆ ಬ್ರಿಟಿಷ್ ಸರಕಾರ ಕ್ಷಮಾಪಣೆ ಕೇಳಬೇಕೆಂದು ಹೇಳಿಕೆ ನೀಡಿದ್ದರು. ಹತ್ಯಾಕಾಂಡದ ಘಟನೆಗೆ ಶತಮಾನ ಪೂರೈಸುವ ಈ ಸಂದರ್ಭದಲ್ಲಿ ಸರಕಾರ ಕ್ಷಮಾಪಣೆ ಕೇಳಬೇಕು . ಇಲ್ಲಿ ಏನು ನಡೆದಿತ್ತು ಎಂಬುದನ್ನು ಸರಿಯಾದ ರೀತಿಯಲ್ಲಿ ಒಪ್ಪಿಕೊಂಡು ಕ್ಷಮೆ ಕೋರುವ ಮೂಲಕ ಈ ಪ್ರಕರಣಕ್ಕೆ ಅಂತ್ಯಹೇಳಬೇಕೆಂದು ಅಮೃತಸರದ ಹಾಗೂ ಭಾರತದ ಜನತೆ ಬಯಸುತ್ತಿದ್ದಾರೆ ಎಂದು ಪಾಕಿಸ್ತಾನ ಮೂಲದ ಖಾನ್ ಹೇಳಿದ್ದರು.

 ಖಾನ್ ಹೇಳಿಕೆ ಹಿನ್ನೆಲೆಯಲ್ಲಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರ ಅಭಿಪ್ರಾಯದ ಬಗ್ಗೆ ಬ್ರಿಟನ್‌ನ ವಿದೇಶ ವ್ಯವಹಾರ ಕಚೇರಿ ನೀಡಿರುವ ಹೇಳಿಕೆಯಲ್ಲಿ - 2013ರಲ್ಲಿ ಜಲಿಯನ್‌ವಾಲಾ ಬಾಗ್‌ಗೆ ಭೇಟಿ ನೀಡಿದ್ದ ಆಗಿನ ಪ್ರಧಾನಿಯವರು ಈ ಹತ್ಯಾಕಾಂಡ ಬ್ರಿಟನ್‌ನ ಚರಿತ್ರೆಯಲ್ಲೇ ಎಂದಿಗೂ ಮರೆಯಲಾದ ಅತ್ಯಂತ ನಾಚಿಕೆಗೇಡಿನ ಕೃತ್ಯವಾಗಿದೆ ಎಂದಿದ್ದರು. ಘಟನೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡವರು ಹಾಗೂ ಅಂದು ಏನು ನಡೆದಿದೆ ಎಂಬುದನ್ನು ಸ್ಮರಿಸುತ್ತಿರುವವರಿಗೆ ಸಲ್ಲಿಸಿದ್ದ ಯೋಗ್ಯ ಗೌರವ ಇದಾಗಿದೆ. ಈ ಘಟನೆಗೆ ಬ್ರಿಟಿಷ್ ಸರಕಾರ ಆಗ ಸರಿಯಾದ ರೀತಿಯಲ್ಲಿ ಖಂಡನೆ ವ್ಯಕ್ತಪಡಿಸಿದೆ ಎಂದು ತಿಳಿಸಲಾಗಿದೆ.

   ಈ ಮಧ್ಯೆ, ಬ್ರಿಟನ್‌ನ ಲೇಬರ್ ಪಕ್ಷದ ಸಂಸದ ವೀರೇಂದ್ರ ಶರ್ಮ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟನ್ ಸರಕಾರ ಕ್ಷಮೆ ಯಾಚಿಸಬೇಕೆಂಬ ತಮ್ಮ ವೆಬ್‌ಸೈಟ್ ಅಭಿಯಾನಕ್ಕೆ ಮತ್ತೆ ಚಾಲನೆ ನೀಡಿದ್ದಾರೆ. ಈ ವರ್ಷಾರಂಭದಲ್ಲಿ ನಡೆಸಿದ ಅಭಿಯಾನಕ್ಕೆ ಕೇವಲ 1,778 ಮಂದಿಯ ಬೆಂಬಲ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News