ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ: ಅರಬ್, ಯುರೋಪ್, ವಿಶ್ವಸಂಸ್ಥೆ ಖಂಡನೆ

Update: 2017-12-07 16:08 GMT

ಜೆರುಸಲೇಂ, ಡಿ. 7: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಿದ ಅಮೆರಿಕದ ಕ್ರಮವನ್ನು ಮಧ್ಯಪ್ರಾಚ್ಯದಾದ್ಯಂತ ಇರುವ ಅರಬ್ಬರು ಮತ್ತು ಮುಸ್ಲಿಮರು ಬುಧವಾರ ಖಂಡಿಸಿದ್ದಾರೆ. ಇದು ಈಗಾಗಲೇ ಸಂಘರ್ಷಾವಸ್ಥೆಯಲ್ಲಿರುವ ವಲಯವನ್ನು ಸ್ಫೋಟಕಗೊಳಿಸುವ ಕ್ರಮವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ತನ್ನ ಈ ಕ್ರಮದ ಮೂಲಕ ಅಮೆರಿಕ ಮಧ್ಯಪ್ರಾಚ್ಯ ಶಾಂತಿಯ ಪ್ರಧಾನ ಮಧ್ಯಸ್ಥಿಕೆದಾರನ ಪಾತ್ರವನ್ನು ಬಿಟ್ಟುಕೊಟ್ಟಿದೆ ಎಂದು ಫೆಲೆಸ್ತೀನ್ ಹೇಳಿದೆ.

ಅಮೆರಿಕ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸುವ ಅಮೆರಿಕದ ನಿರ್ಧಾರದ ಬಗ್ಗೆ ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆಗಳೂ ಕಳವಳ ವ್ಯಕ್ತಪಡಿಸಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಈ ಕ್ರಮವು ಇಸ್ರೇಲ್-ಫೆಲೆಸ್ತೀನ್ ಶಾಂತಿಗೆ ಪುನಶ್ಚೇತನ ನೀಡುವ ಸಾಧ್ಯತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದಿವೆ.

ಫ್ರಾನ್ಸ್, ಬ್ರಿಟನ್, ಜರ್ಮನಿ ಮುಂತಾದ ಅಮೆರಿಕದ ಪ್ರಮುಖ ಮಿತ್ರದೇಶಗಳೂ ಟ್ರಂಪ್‌ರ ಈ ನಿರ್ಧಾರವನ್ನು ಟೀಕಿಸಿವೆ.

ಅಮೆರಿಕದ ವಿಶ್ವಾಸಾರ್ಹತೆ ನಾಶ: ಫೆಲೆಸ್ತೀನ್

ಜೆರುಸಲೇಂ ಫೆಲೆಸ್ತೀನ್ ದೇಶದ ಶಾಶ್ವತ ರಾಜಧಾನಿಯಾಗಿದೆ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ಈ ನಿರ್ಧಾರವು, ಇಸ್ರೇಲ್-ಫೆಲೆಸ್ತೀನ್ ಶಾಂತಿ ಮಾತುಕತೆಯ ಸಂಧಾನಕಾರನ ಪಾತ್ರವನ್ನು ಅಮೆರಿಕ ತೊರೆದಿರುವುದಕ್ಕೆ ಸಮವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News