ಜನರ ಆರೋಗ್ಯ, ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ -ಎಸ್. ಸಸಿಕಾಂತ್ ಸೆಂಥಿಲ್
ಮಂಗಳೂರು, ಡಿ.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಆರೋಗ್ಯ ಮತ್ತು ಸುರಕ್ಷತೆಯ ಪೂರಕವಾದ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆ ಮಾಡುವ ಸಂದರ್ಭದಲ್ಲಿ ಪ್ರಾಚೀನ ಕುರುಹುಗಳು ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಹಾನಿಯಾಗದಂತೆ ನಗರವನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು .ಈ ಯೋಜನೆಯನ್ನು ಕಾರ್ಯಗತಗೊಳಿಸುವ ಹಂತದಲ್ಲಿ ನಾಗರಿಕರ ಅಭಿಪ್ರಾಯವನ್ನು ಪಡೆಯಲು ಸಮಾಲೋಚನೆಗಳು ವಿವಿಧ ಹಂತಗಳಲ್ಲಿ ನಡೆಯಬೇಕಾಗುತ್ತದೆ, ನಗರಾಭಿವೃದ್ಧಿಯ ಬಗ್ಗೆ ನಾಗರಿಕರೊಂದಿಗಿನ ಸಮಾಲೋಚನೆ ಮುಖ್ಯ ಎಂದು ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಅಗತ್ಯ:-ನಗರದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಮುಂದಿನ ಹಂತದಲ್ಲಿ ಗಂಭೀರ ಸಮಸ್ಯೆಯಾಗಬಹುದು ಈ ಹಿನ್ನೆಲೆಯಲ್ಲಿ ಕಸ ವಿಂಗಡಣೆ, ಮರು ಬಳಕೆ, ಹಸಿ ಸಗಳನ್ನು ಸ್ಥಳೀಯವಾಗಿ ಸಂಸ್ಕರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ರೀತಿಯ ಜಾಗೃತಿ ಬೆಳೆಸಿದಾಗ ಕಸ ಸಂಗ್ರಹದ ಪ್ರಮಾಣ ಕಡಿಮೆಯಾಗ ತೊಡಗುತ್ತದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಸೂಕ್ತಕ್ರಮಗಳು ಮತ್ತು ಸಾರ್ವಜನಿಕ ವಲಯದಲ್ಲಿ ಜಾಗೃತಿ ಮುಡಿಸಬೇಕಾಗಿದೆ.ತುಂಬೆಯಲ್ಲಿ ನೀರು ಸಂಗ್ರಹದ ಪ್ರಮಾಣವನ್ನು ಹೆಚ್ಚಿಸಲಾಗಿದೆ.ಜೊತೆಗೆ ಜಿಲ್ಲೆಯಲ್ಲಿ ನೀರಿನ ಮೂಲಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸೆಂಥಿಲ್ ತಿಳಿಸಿದ್ದಾರೆ.
ನಗರ ಯೋಜನೆಯಲ್ಲಿನ ನ್ಯೂನತೆಯ ಫಲವಾಗಿ ಟ್ರಾಫಿಕ್ ಸಮಸ್ಯೆ:-ಮಂಗಳೂರು ನಗರದಲ್ಲಿ ಅಥವಾ ಇನ್ನಾವುದೇ ನಗರದಲ್ಲಾಗಲಿ ವಾಹನದಟ್ಟಣೆಯ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ನಗರ ಯೋಜನೆಯಲ್ಲಿನ ನ್ಯೂನತೆಯಾಗಿದೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರು ನಿರ್ವಹಣೆ,ಟ್ರಾಫಿಕ್ ಸಮಸ್ಯೆ,ಪ್ರವಾಸೋದ್ಯಮ ಅಭಿವೃದ್ಧಿ,ನಗರದ ಮೂಲ ಭೂತ ಸೌಕರ್ಯ ಅಭಿವೃದ್ಧಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಕುರಿತು ಕೆಸಿಸಿಐ ಅಧ್ಯಕ್ಷೆ ವಾತಿಕ ಪೈ ತಿಳಿಸಿದರು.ಜಿಲ್ಲೆಯ ಜನರು ನೆನಪಿಟ್ಟುಕೊಳ್ಳುವ ಕೆಲಸ ಮಾಡಿದ ಜಿಲ್ಲಾಧಿಕಾರಿಗಳಲ್ಲಿ ಎಸ್.ಕೆ.ದಾಸ್,ಭರತ್ ಲಾಲ್ ಮೀನಾ,ಪೊನ್ನುರಾಜ್,ಇಬ್ರಾಹೀಂ ಪ್ರಮುಖರು ಇವರ ಅವಧಿಯಲ್ಲಿ ಮಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ಕೆಲಸ ನಡೆದಿದೆ ಎಂದು ಕೆಸಿಸಿಐನ ಮಾಜಿ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ತಿಳಿಸಿದ್ದಾರೆ.
ರಸ್ತೆ ಅಗಲ ಗೊಳಿಸುವ ಬದಲು ಈಗ ಇರುವ ರಸ್ತೆಯನ್ನು ಸಮರ್ಪಕವಾಗಿ ಬಳಸಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.ಜನರ ಭೂಮಿಯನ್ನು ಸರಕಾರ ಸ್ವಾಧೀನ ಪಡಿಸುವ ಸಂದರ್ಭದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಯೊಬ್ಬರು ಆಗ್ರಹಿಸಿದರು.
ಸಭೆಯಲ್ಲಿ ಕೆಸಿಸಿಐನ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸ್ವಾಗತಿಸಿದರು. ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.