ನಂತೂರು ಜಂಕ್ಷನ್‌ನ ಅವೈಜ್ಞಾನಿಕ ವೃತ್ತದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಆಗ್ರಹ
ಮಂಗಳೂರು, ಡಿ. 8: ನಂತೂರು ಜಂಕ್ಷನ್‌ನಲ್ಲಿ ಗುರುವಾರ ಸಂಭವಿಸಿದ ಅಪಘಾತ ಮತ್ತು ಈ ಜಂಕ್ಷನ್‌ನಲ್ಲಿರುವ ಅವೈಜ್ಞಾನಿಕ ವೃತ್ತ ಹಾಗೂ ಅದರಿಂದಾಗುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹ ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿ ಬಂತು.
ಮಂಗಳೂರಿನಲ್ಲೇ ನಂತೂರು ವೃತ್ತವು ಭಾರೀ ಅಪಾಯಕಾರಿಯಾಗಿದೆ. ಅದನ್ನು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಜರಗಿಸಬೇಕು ಎಂದು ಹಲವು ಮಂದಿ ಒತ್ತಾಯಿಸಿದರು.
ಪೋನ್ ಕರೆಗಳನ್ನು ಸ್ವೀಕರಿಸಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಂತೂರು ವೃತ್ತದ ಸಮಸ್ಯೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಮತ್ತು ಇಂಜಿನಿಯರ್ ಜತೆ ಸಮಾಲೋಚನೆ ನಡೆಸಿ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು. ನಗರದ ಸಂಚಾರ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಡಿ.12ರಂದು ಸಂಬಂಧ ಪಟ್ಟ ಎಲ್ಲರನ್ನೂ ಸೇರಿಸಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಬಸ್‌ಗಳಲ್ಲಿ ಮಹಿಳಾ ಮತ್ತು ಹಿರಿಯ ನಾಗರೀಕರ ಮೀಸಲು ಸೀಟುಗಳಲ್ಲಿ ಇತರ ಪ್ರಯಾಣಿಕರು ಕುಳಿತು ಪ್ರಯಾಣಿಸುವ ಬಗ್ಗೆ ಮಹಿಳೆಯೋರ್ವರು ಕರೆ ಮಾಡಿ ತನಗಾದ ಅನುಭವವನ್ನು ಹಂಚಿಕೊಂಡರು. ಸೀಟು ಬಿಟ್ಟುಕೊಡುವಂತೆ ಕೇಳಿಕೊಂಡರೆ ಉಡಾಫೆಯಿಂದ ವರ್ತಿಸುತ್ತಾರೆ. ಅವರ ಜತೆ ಇತರ ಪ್ರಯಾಣಿಕರು ಸೇರಿಕೊಂಡು ಅಸಹ್ಯವಾಗಿ ಹಾಗೂ ಅವಮಾನಕಾರಿಯಾಗಿ ಮಾತನಾಡುತ್ತಾರೆ ಎಂದು ಆ ಮಹಿಳೆ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಮೀಸಲು ಸೀಟುಗಳನ್ನು ಸಂಬಂಧಪಟ್ಟ ಅರ್ಹ ಪ್ರಯಾಣಿಕರಿಗೆ ಒದಗಿಸುವುದು ಬಸ್ ಕಂಡಕ್ಟರ್ ಜವಾಬ್ದಾರಿ. ಹಾಗಾಗಿ ಸೀಟು ಬಿಟ್ಟು ಕೊಡುವ ಬಗ್ಗೆ ಮಹಿಳೆಯರು/ಹಿರಿಯ ನಾಗರೀಕರು ಕಂಡಕ್ಟರ್‌ಗೆ ತಿಳಿಸಬೇಕು. ಕಂಡಕ್ಟರ್ ಕೇಳಿ ಕೊಂಡಾಗಲೂ ಸೀಟು ಬಿಟ್ಟು ಕೊಡಲು ಒಪ್ಪದಿದ್ದರೆ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ ಪೊಲೀಸರಿಗೆ ಫೋನ್ ಕರೆ ಮಾಡಬೇಕು ಎಂದರು.
ಕುಪ್ಪೆಪದವಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಬೆಳ್ತಂಗಡಿಯಲ್ಲಿ ಗಾಂಜಾ ಮಾರಾಟ, ಮೂಡುಬಿದಿರೆಯಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಮಾರಾಟದ ಬಗ್ಗೆ ದೂರುಗಳು ಬಂದವು. ಮಂಗಳಾದೇವಿ ಮತ್ತು ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರು ಕೂಡ ಕೇಳಿ ಬಂತು.
ಪಿವಿಎಸ್ ಜಂಕ್ಷನ್ ಮತ್ತು ಬಂಟ್ಸ್ ಹಾಸ್ಟೆಲ್ ವೃತ್ತ ನಡುವಣ ರಸ್ತೆಯಲ್ಲಿ ದೂರದ ಊರುಗಳಿಗೆ (ಬೆಂಗಳೂರು, ಮುಂಬೈ, ಬೆಳಗಾವಿ ಇತ್ಯಾದಿ) ಹೋಗುವ ಖಾಸಗಿ ಬಸ್ಸುಗಳನ್ನು ಬಹಳಷ್ಟು ಹೊತ್ತು ನಿಲ್ಲಿಸುವುದರಿಂದ ಈ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಈ ಕುರಿತು ತಪಾಸಣೆ ನಡೆಸಿ ಕ್ರಮ ಜರಗಿಸುವಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಸೂಚಿಸಿದರು.
ಕದ್ರಿ ಪರಿಸರದಲ್ಲಿ ಇಡೀ ರಾತ್ರಿ ಯಕ್ಷಗಾನದಿಂದಾಗಿ ಶಬ್ಧ ಮಾಲಿನ್ಯ ಉಂಟಾಗಿ ಸುತ್ತಮುತ್ತಲಿನ ಜನರ ನಿದ್ದೆಗೆ ಅಡ್ಡಿಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು. ಮೈಕ್‌ನ ಶಬ್ದವನ್ನು ಕಡಿಮೆ ಮಾಡುವಂತೆ ಹಾಗೂ ರಾತ್ರಿ 10ರ ಬಳಿಕ ಒಳಾಂಗಣದಲ್ಲಿ ಮಾತ್ರ ಯಕ್ಷಗಾನದಂತಹ ಕಾರ್ಯಕ್ರಮ ನಡೆಸುವಂತೆ ಸಂಬಂಧ ಪಟ್ಟವರಿಗೆ ನೋಟಿಸ್ ನೀಡಲಾಗುವುದು ಎಂದು ಕಮಿಷನರ್ ಭರವಸೆ ನೀಡಿದರು.
ಉರ್ವ ಮಾರ್ಕೆಟ್- ಅಶೋಕನಗರ ರಸ್ತೆಯ ಎರಡು ಹಾಲ್‌ಗಳ ಬಳಿ ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆಯ ಒಂದೇ ಕಡೆ ಪಾರ್ಕ್ ಮಾಡುವಂತೆ ವ್ಯವಸ್ಥೆ ಮಾಡ ಬೇಕು ಎಂಬ ಸಲಹೆ ಕೇಳಿ ಬಂತು. ಈ ಕುರಿತು ಹಾಲ್‌ಗಳ ಮಾಲಕರಿಗೆ ನೊಟೀಸ್ ನೀಡಲಾಗುವುದು ಹಾಗೂ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದು ಕಮಿಷನರ್ ಹೇಳಿದರು.
ಟೇಪ್ ರೆಕಾರ್ಡರ್: ಬಸ್ ಮಾಲಕರಿಗೆ ನೋಟಿಸ್
ಸುರತ್ಕಲ್ ಕೃಷ್ಣಾಪುರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಟೇಪ್ ರೆಕಾರ್ಡರ್ ಹಾವಳಿ ಜಾಸ್ತಿಯಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಬಿ.ಪಿ. ದಿವಾಕರ್ ಮಾತನಾಡಿ ಟೇಪ್ ರೆಕಾರ್ಡರ್ ಹಾಕಬಾರದೆಂದು ಎಲ್ಲಾ ಬಸ್ ಮಾಲಕರಿಗೆ ಮತ್ತು ನೌಕರರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು.
64ನೇ ಈ ಫೋನ್ ಇನ್ ಕಾರ್ಯಕ್ರಮದಲ್ಲಿ 25 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ , ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಸುರೇಶ್ ಕುಮಾರ್, ಮಂಜುನಾಥ್, ಮೋಹನ್ ಕೊಟ್ಟಾರಿ, ಮುಹಮ್ಮದ್ ಶರೀಫ್, ಎಎಸ್ಸೈ ಯೂಸುಫ್, ಹೆಡ್‌ಕಾನ್ಸ್‌ಟೇಬಲ್ ಪುರುಷೋತ್ತಮ ಉಪಸ್ಥಿತರಿದ್ದರು.