×
Ad

ಮೇಯರ್, ಸದಸ್ಯರು, ಸಿಬ್ಬಂದಿಯಿಂದ ಕಲಾ ವೈಭವ

Update: 2017-12-08 20:02 IST

ಮಂಗಳೂರು, ಡಿ.8: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ 30 ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಮಹಾನಗರ ಪಾಲಿಕೆ ದಿನಾಚರಣೆ ಯನ್ನು ಇಂದು ಆಯೋಜಿಸಲಾಯಿತು.

ನಗರದ ಪುರಭವನದಲ್ಲಿ ನಡೆದ  ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ನಗರದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ದಿವಂಗತ ಉಳ್ಳಾಲ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದು, ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖುದ್ದಾಗಿ ಮೇಯರ್ ಕವಿತಾ ಸನಿಲ್‌ ಅವರು ಹಾಡು ಹಾಡಿ, ತನ್ನ ಸಹ ಸದಸ್ಯರ ಜತೆ ವೇದಿಕೆಯಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರೆ, ಪಾಲಿಕೆಯ ಸಿಬ್ಬಂದಿಗಳು ಕೂಡಾ ಹಾಡು, ನೃತ್ಯಗಳ ಮೂಲಕ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

ರಾಷ್ಟ್ರೀಯ ಕರಾಟೆ ಚಾಂಪಿಯನ್ ಆಗಿ ಇತ್ತೀಚೆಗಷ್ಟೇ ತಮ್ಮ ಸಾಧನೆಗೆ ಮತ್ತೊಂದು ಗರಿ ತುಂಬಿರುವ ಮೇಯರ್ ಕವಿತಾ ಸನಿಲ್‌ ಅವರು ಕಚೇರಿಯ ತಮ್ಮ ಆಪ್ತ ಸಹಾಯಕ ಶರಣ್ ಜತೆ ವೇದಿಕೆಯಲ್ಲಿ ‘ಜತೆ ಜತೆಯಲಿ’ ಕನ್ನಡ ಹಾಡು ಹಾಡುವ ಮೂಲಕ ಪ್ರೇಕ್ಷಕರನ್ನು ಹುಬ್ಬೇರಿಸಿದರು. ಮಾತ್ರವಲ್ಲದೆ, ಸಹ ಸದಸ್ಯರಾದ ಆಶಾ ಡಿಸಿಲ್ವಾ ಹಾಗೂ ಸಬಿತಾ ಮಿಸ್ಕಿತ್ ಜತೆ ನೃತ್ಯವನ್ನೂ ಮಾಡಿದರು.

ಉಪ ಮೇಯರ್ ರಜನೀಶ್‌ ಅವರು ಮಿಮಿಕ್ರಿ ಮೂಲಕ ತಮ್ಮ ಕಲಾ ಚಾತುರ್ಯತೆ ಪ್ರದರ್ಶಿಸಿದರೆ, ಸದಸ್ಯರಾದ ಅಪ್ಪಿ ಎದೆ ತುಂಬಿ ಹಾಡಿದೆನು ಎಂಬ ಭಾವಗೀತೆ ಹಾಡಿದರು.

ಸದಸ್ಯ ದಯಾನಂದ ಶೆಟ್ಟಿಯವರು ಖ್ಯಾತ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರ ‘ಮೂಡಾಯಿ ಗಾಳಿ ಬೀಜುಂಡು’ ತುಳು ಹಾಡನ್ನು ಹಾಡಿದರು. ಸದಸ್ಯರಾದ ಕೇಶವ್ ಮರೋಳಿ, ಅಬ್ದುಲ್ ಲತೀಫ್ ಹಿಂದಿ ಚಲನಚಿತ್ರಗೀತೆ ಹಾಡಿದರು. ಪಾಲಿಕೆಯ ಸಿಬ್ಬಂದಿಗಳಾದ ಸೇಜಲ್ ಫ್ಲೇವಿ, ರವಿರಾಜ್ ಮೊದಲಾದವರು ಹಾಡು, ನೃತ್ಯದ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News