ಮಂಗಳೂರಿನಲ್ಲಿ ಶೂಟೌಟ್: ಓರ್ವನಿಗೆ ಗಾಯ
ಮಂಗಳೂರು, ಡಿ. 8: ನಗರದ ರಥಬೀದಿಯಲ್ಲಿರುವ ವಸ್ತ್ರ ಮಳಿಗೆಯೊಂದಕ್ಕೆ ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.
ರಥಬೀದಿಯಲ್ಲಿರುವ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್ ಸಾರೀಸ್ ವಸ್ತ್ರ ಮಳಿಗೆಯಲ್ಲಿ ಈ ದಾಳಿ ನಡೆದಿದೆ.
ದಾಳಿಯಲ್ಲಿ ಮಳಿಗೆಯ ಸಿಬ್ಬಂದಿ ಕಾಸರಗೋಡಿನ ಮಾಲಿಂಗ ನಾಯ್ಕ (40) ಎಂಬವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದಾರೆಂದು ಹೇಳಲಾಗಿದೆ. ಈ ಪೈಕಿ ಓರ್ವ ಮಳಿಗೆಯ ಒಳಗೆ ಹೋಗಿದ್ದ. ಮತ್ತೋರ್ವ ಹೊರಗೆ ಇದ್ದು ಗುಂಡು ಹಾರಿಸಿದ್ದಾನೆ. ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳು ಸಹಿತ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಟೀ ಶರ್ಟ್ ಕೇಳಿಕೊಂಡು ಬಂದಿದ್ದರು: ಕಮಿಷನರ್
ಕಾರ್‌ಸ್ಟ್ರೀಟ್‌ನ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್ ಸಾರೀಸ್ ಬಟ್ಟೆ ಮಳಿಗೆ ಇಬ್ಬರು ಬಂದಿದ್ದರು. ಈ ಪೈಕಿ ಓರ್ವ ಒಳಗೆ ಹೋಗಿದ್ದರೆ, ಮತ್ತೋರ್ವ ಹೊರಗೆ ನಿಂತಿದ್ದ. ಒಳಗಿದ್ದವನು ಟೀ ಶರ್ಟ್‌ನ್ನು ಕೇಳಿದ್ದಾರೆ. ಮಳಿಗೆಯ ಸಿಬ್ಬಂದಿ ಇಲ್ಲಿ ಟೀ ಶರ್ಟ್ ಸಿಗುವುದಿಲ್ಲ ಅಂದಿದ್ದಾರೆ. ಇದೇ ಸಂದರ್ಭ ಹೊರಗಿದ್ದಾತ ದಾಳಿ ನಡೆಸಿದ್ದಾನೆ ಎಂದು ಕಮಿಷನರ್ ತಿಳಿಸಿದ್ದಾರೆ.
ಘಟನೆಯಲ್ಲಿ ಬಟ್ಟೆ ಮಳಿಗೆಯ ಸಿಬ್ಬಂದಿ ಮಾಲಿಂಗ ನಾಯ್ಕ ಎಂಬಾತನ ತೊಡೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದಿದ್ದರು ಎಂದು ನಗರ ಪೊಲೀಸ್ ಆಯುಕ್ತರು ವಿವರಿಸಿದರು.