ಹೊನ್ನಾವರದಲ್ಲಿ ಯುವಕನ ಅನುಮಾನಾಸ್ಪದ ಸಾವು: ಮುಖ್ಯಮಂತ್ರಿ ವಿರುದ್ಧ ಸಂಸದೆ ಶೋಭಾ ಆರೋಪ
ಉಡುಪಿ, ಡಿ. 8: ಉತ್ತರ ಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿರಿಸುವ ಮೊದಲೇ ಹೊನ್ನಾವರದಲ್ಲಿ ದೊಡ್ಡ ಮಟ್ಟದ ಗಲಭೆ, ಹಿಂಸೆ ನಡೆದಿದ್ದು, ಇದರಿಂದ 21ರ ಹರೆಯದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಈ ವಿಷಯವನ್ನು ಮುಚ್ಚಿಟ್ಟು, ಆತನ ಮೃತ ದೇಹದ ಮೇಲೆ ಸಿದ್ದ ರಾಮಯ್ಯ 50ಕ್ಕೂ ಅಧಿಕ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿ ಹೋಗಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಗಲಭೆಯ ವೇಳೆ ಪರೇಶ್ ಮೇಸ್ತ ಎಂಬ ಸಂಘ ಪರಿವಾರದ ಕಾರ್ಯಕರ್ತ ಮೃತಪಟ್ಟಿದ್ದು, ಆತನನ್ನು ಜಿಹಾದಿಗಳು ಕೊಂದದ್ದು ಗೊತ್ತಿದ್ದೂ, ಮುಖ್ಯಮಂತ್ರಿ ಅದನ್ನು ಬಚ್ಚಿಟ್ಟು ಉತ್ತರ ಕನ್ನಡದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿ ಸಿಎಂ ಕಾರ್ಯಕ್ರಮ ಇದೆ ಎನ್ನುವ ಕಾರಣಕ್ಕೆ ಪೊಲೀಸರು ಈ ವಿಷಯ ಮುಚ್ಚಿಟ್ಟರು ಎಂದವರು ಮಣಿಪಾಲದ ತನ್ನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಟ್ಕಳ ವಿಧಾನಸಭಾ ಕ್ಷೇತ್ರದ ಹೊನ್ನಾವರದ ಚಂದಾಪುರದಲ್ಲಿ ಸಮಾರಂಭವೊಂದರ ಹಿಂದಿನ ದಿನ ಗಲಭೆಯಾಗಿತ್ತು. ಅಲ್ಲಿನ ಹನುಮಂತ ದೇವಸ್ಥಾನಕ್ಕೆ ಕಲ್ಲು ಎಸೆದಿದ್ದು, ಅದರ ಎದುರುಗಡೆ ತಾತ್ಕಾಲಿಕವಾದ ಮಸೀದಿಯನ್ನು ನಿರ್ಮಿಸಲಾಗಿತ್ತು. ಇದನ್ನು ಆಕ್ಷೇಪ ಮಾಡಿದ್ದಕ್ಕೆ ಅಲ್ಲಿದ್ದ ಹಿಂದೂಗಳ ಮೇಲೆ ಜಿಹಾದಿಗಳು ಹಲ್ಲೆ, ದೌರ್ಜನ್ಯ ನಡೆಸಿದ್ದರು. ಅಲ್ಲಿನ ಬಿಜೆಪಿ ನಾಯಕ ಸೂರಜ್ ನಾಯ್ಕೆ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅವರ ಕಾರನ್ನು ಸಂಪೂರ್ಣ ಜಖಂ ಗೊಳಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ, ಎಸ್ಪಿಗೆ ದೂರು ನೀಡಿದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶೋಭಾ ದೂರಿದರು.
ಇದರ ಪರಿಣಾಮವಾಗಿ ಸಮಾರಂಭ ಮುಗಿದ ಎರಡು ದಿನಗಳ ಬಳಿಕ ಹೊನ್ನಾವರದಲ್ಲಿ ದೊಡ್ಡ ಮಟ್ಟದ ಗಲಭೆ ನಡೆದಿದ್ದು, ಹೊನ್ನಾವರದ ಶನೀಶ್ವರ ದೇವಸ್ಥಾನಕ್ಕೆ ಕಲ್ಲು, ಚಪ್ಪಲಿ ಎಸೆಯಲಾಗಿದೆ. ಅಲ್ಲಿ ಸೇರಿದ್ದ ನಮ್ಮ ಕಾರ್ಯಕರ್ತರನ್ನು ಪೊಲೀಸರು ಲಾಠಿ ಚಾರ್ಜ್ ಮಾಡಿ ಚದುರಿಸಿದ್ದಾರೆ. ಜಿಹಾದಿಗಳು ಲಾಂಗು ಮಚ್ಚುಗಳನ್ನು ಹಿಡಿದು ಜನರನ್ನು ಬೆದರಿಸಿದ್ದಾರೆ. ಅದೇ ದಿನ ರಾತ್ರಿ ಪರೇಶ್ ಮೇಸ್ತ ನಾಪತ್ತೆಯಾಗಿದ್ದು, ಇದು ಪೊಲೀಸರಿಗೂ ತಿಳಿದಿತ್ತು. ಮರುದಿನ ಜಿಲ್ಲೆಯಲ್ಲಿ ಮುಖ್ಯಮಂತ್ರಿಯ ಕಾರ್ಯಕ್ರಮವಿರುವ ಕಾರಣ ನಾಪತ್ತೆ ಪ್ರಕರಣವನ್ನು ಮುಚ್ಚಿಟ್ಟಿದ್ದರು.
ಮುಖ್ಯಮಂತ್ರಿ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 52 ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸ್ವತಃ ಮುಖ್ಯಮಂತ್ರಿಗೆ ಪರೇಶ್ ಸತ್ತಿರುವುದು ಹಾಗೂ ಜಿಹಾದಿಗಳು ಆತನನ್ನು ಕೊಂದಿರುವುದು ಗೊತ್ತಿತ್ತು. ಇದನ್ನು ಮುಚ್ಚಿಟ್ಟು ಅವರು ಆತನ ಹೆಣದ ಮೇಲೆ ಶಿಲಾನ್ಯಾಸ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಳೆದ ಬಾರಿ ಮಂಗಳೂರಿನಲ್ಲೂ ಶರತ್ ಮಡಿವಾಳ ಸತ್ತಾಗ ಇದೇ ರೀತಿ ಮುಖ್ಯಮಂತ್ರಿಗಳು ನಡೆದುಕೊಂಡಿದ್ದರು. ಹೊನ್ನಾವರದಲ್ಲಿ ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಆದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹಿಂದೂ ವಿರೋಧಿ ನೀತಿ ಅನುಸರಿಸುತಿದ್ದಾರೆ ಎಂದರು.
ಈ ಗಲಭೆಯಲ್ಲಿ ನರಸಿಂಹ ಹಾಗೂ ಹರೀಶ್ ಎಂಬ ಇಬ್ಬರು ತರುಣರು ಮಾರಣಾಂತಿಕವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಸಿದ್ದರಾಮಯ್ಯರಂತಹ ಮುಖ್ಯಮಂತ್ರಿಯಿಂದ ಹಿಂದೂಗಳು ಯಾವ ರೀತಿಯ ರಕ್ಷಣೆ ಪಡೆಯಲು ಸಾಧ್ಯ ಎಂದವರು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಕುರಿತು ಮಣಿಶಂಕರ್ ಅಯ್ಯರ್ ಅವರ ಹೇಳಿಕೆ ಕಾಂಗ್ರೆಸ್‌ನ ಮಾನಸಿಕತೆಯ ದ್ಯೋತಕವಾಗಿದ್ದು, ಬಡ ಹಿಂದುಳಿದ ಜಾತಿಯ ಪ್ರಧಾನಿಯನ್ನು ನೀಚ ಎಂದಿರುವುದು ಕಾಂಗ್ರೆಸ್‌ಗೆ ದುಬಾರಿಯಾಗಲಿದೆ ಎಂದರು. ಗುಜರಾತ್‌ನ ಜನ ಕಾಂಗ್ರೆಸ್‌ಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಅಯ್ಯರ್ ಅಮಾನತು ಜನರ ಕಣ್ಣೊರೆಸುವ ತಂತ್ರ ಎಂದರು.