ಕಾರಿನಲ್ಲಿ ಒಂದು ಕೋಟಿ ರೂ. ಸಾಗಾಟ: ನಗದು ಹಣದೊಂದಿಗೆ ಮೂವರ ಬಂಧನ
ಮಂಗಳೂರು, ಡಿ.8: ಮಹಾರಾಷ್ಟ್ರ ನೋಂದಣಿಯ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ ದಾಖಲೆಗಳಿಲ್ಲದ 1 ಕೋಟಿ ರೂ. ನಗದನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಲಾ ನಗರ್ ನಿವಾಸಿ ತಾನಾಜಿ (54), ಬೆಳಗಾವಿ ಜಿಲ್ಲೆಯ ಅಥನಿ ತಾಲೂಕು ಬಮ್ಮನಾಲ ಗ್ರಾಮದ ದಿನೇಶ್ ಪ್ರಕಾಶ್ ಸಿಂಧೆ (20) ಮತ್ತು ಮಹಾರಾಷ್ಟ್ರ ಸಾಂಗ್ಲಿಯ ಕುಮುತಾದ ಅಮುಲ್ ಮಾಲಿ (29) ಬಂಧಿತ ಆರೋಪಿಗಳು.
ಕಂಕನಾಡಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರವಿ ನಾಯ್ಕ್ ಅವರು ರಾತ್ರಿ ರೌಂಡ್ಸ್‌ನಲ್ಲಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಎಂಎಚ್ 10-ಸಿಎ9908 ನಂಬರಿನ ಹೊಂಡೈ ಐ20 ಕಾರನ್ನು ತಡೆದು ನಿಲ್ಲಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆಗಳಿಲ್ಲದ ಒಂದು ಕೋಟಿ ನಗದು ಹಣವನ್ನು ಕಾರಿನಲ್ಲಿ ಪತ್ತೆಯಾಗಿದೆ. ಕೂಡಲೇ ಪೊಲೀಸರು ಕಾರು ಚಾಲಕ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ಬಳಿ ಇದ್ದ ಒಂದು ಕೋಟಿ ರೂ. ನಗದು, ಕಾರು ಮತ್ತು ಮೊಬೈಲ್ ಫೋನ್‌ನ್ನು ಸ್ವಾಧೀನಪಡೆದುಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ ಉಮಾ ಪ್ರಶಾಂತ್, ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ರಾಮರಾವ್ ಅವರ ಸಲಹೆ ಮತ್ತು ನಿರ್ದೇಶನದಲ್ಲಿ ಕಂಕನಾಡಿ ಪೊಲೀಸ್ ನಿರೀಕ್ಷಕ ರವಿ ನಾಯ್ಕಿ ಹಾಗೂ ಪಿಎಸ್‌ಐಗಳಾದ ಪ್ರದೀಪ್, ಜಾನಕಿ, ಸಿಬ್ಬಂದಿಯವರಾದ ದಯಾನಂದ, ವಿನೋದ್, ನೂತನ್ ಕುಮಾರ್, ರವೀಂದ್ರನಾಥ ರೈ, ಮದನ್, ಸಂತೋಷ್, ರಘುವೀರ್, ಸಂದೀಪ್ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.