×
Ad

2ನೆ ಹಂತದ ಸಮಗ್ರ ಒಳಚರಂಡಿ ಯೋಜನೆಗೆ 56.54 ಕೋಟಿ ರೂ. ಮಂಜೂರು

Update: 2017-12-08 21:53 IST

ಬಂಟ್ವಾಳ, ಡಿ. 8: ಪುರಸಭಾ ವ್ಯಾಪ್ತಿಯಲ್ಲಿ 2ನೆ ಹಂತದ ಸಮಗ್ರ ಒಳಚರಂಡಿ ಯೋಜನೆಗೆ 56.54ಕೋಟಿ ರೂ.ಗೆ ಆಡಳಿತಾತ್ಮಕ ಮಂಜೂರಾತಿ ದೊರಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದೀಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ನದಿಗೆ ನಗರದ ವಿವಿಧೆಡೆಯಲ್ಲಿ ಕೊಳಚೆ ನೀರು ಸೇರುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ ಎಂದರು.

 ಒಳಚರಂಡಿ ಯೋಜನೆಯಲ್ಲಿ ಒಂದನೇ ಹಂತದ ಕಾಮಗಾರಿಯಲ್ಲಿ 90 ಸೀವರ್ಸ್‌ ನೆಟ್‌ವರ್ಕ್ ಅಳವಡಿಸಲಾಗಿದ್ದು, ಅದರ ಮುಂದಿನ ವಿಸ್ತರಣಾ ಕಾಮಗಾರಿ 56.54 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದರು.

ಪುರಸಭೆಯನ್ನು ನಗರ ಸಭೆಯನ್ನಾಗಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಇದಕ್ಕೆ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುವ ಗ್ರಾಮ ಪಂಚಾಯತ್‌ನ್ನು ಮನವೊಲಿಸಲಾಗುವುದು ಎಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರ ಸಭೆಯಾಗಿ ಮೇಲ್ದರ್ಜೆಗೆರಿದರೆ ನಗರದ ಅಭಿವೃದ್ಧಿ ಕಾರ್ಯಕ್ಕೆ ಸುಮಾರು 25 ಕೋಟಿ ರೂ. ಅನುದಾನ ದೊರಕಲಿದೆ. ಬಂಟ್ವಾಳ ಪೇಟೆಯ ರಸ್ತೆ ಅಗಲೀಕರಣಕ್ಕೆ ಸ್ಥಳೀಯರ ಸಹಕಾರವೂ ಅಗತ್ಯವಿದೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಜನಪದವಿನಲ್ಲಿ ಬಂಟ್ವಾಳ ತಾಲೂಕು ಕ್ರೀಡಾಂಗಣಕ್ಕೆ ಈಗಾಗಲೇ 10 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದ್ದು, ತನ್ಮೂಲಕ ತಾನು ನುಡಿದಂತೆ ನಡೆದಿದ್ದೇನೆ ಎಂದ ಸಚಿವರು, ಬಿ.ಸಿ.ರೋಡ್ ವೃತ್ತದಿಂದ ಪೂಂಜಲ್‌ಕಟ್ಟೆಯವರೆಗೆ ಸಿಆರ್‌ಎಫ್ ಯೋಜನೆಯಲ್ಲಿ ಸುಮಾರು 159 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, ಅತೀ ಶೀಘ್ರದಲ್ಲಿ ಈ ಯೋಜನೆಗೂ ಆಡಳಿತಾತ್ಮಕ ಮಂಜೂರಾತಿ ದೊರಕಲಿದೆ ಎಂದರು.

ವಿಶ್ವೇಶ್ವರಯ್ಯ ನಿಗಮದಿಂದ ನೇತ್ರಾವತಿ ನದಿ ತೀರದ ಅಗತ್ಯವಿರುವೆಡೆ ತಡೆಗೋಡೆ ನಿರ್ಮಾಣಕ್ಕಾಗಿ ಸುಮಾರು 300 ಕೋಟಿ ರೂ.ವಿನ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದಕ್ಕೂ ಶೀಘ್ರವೇ ಆಡಳಿತಾತ್ಮಕ ಮಂಜೂರಾತಿ ದೊರಕುವ ವಿಶ್ವಾಸವಿದೆ ಎಂದರು.

ಬಿ.ಸಿ.ರೋಡ್‌ನ ನೂತನ ಕೆಎಸ್ಸಾರ್ಟಿಸಿ ಬಸ್ ಪ್ರವೇಶಿಸುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಪೊಲೀಸ್ ಹಾಗೂ ಜಿಲ್ಲಾಧಿಕಾರಿ ಅವರು ವಿಶೇಷ ಸಭೆಯೊಂದನ್ನು ನಡೆಸಿ ಅಗತ್ಯ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ ಸಚಿವರು, ಉದ್ದೇಶಿತ ಸ್ಥಳದಲ್ಲಿ ಖಾಸಗಿ ಬಸ್ ನಿಲ್ದಾಣದ ಯೋಜನೆಯೂ ಅತೀ ಶೀಘ್ರದಲ್ಲಿ ಕಾರ್ಯಗತವಾಗಲಿದೆ. ಇದಕ್ಕಿರುವಂತಹ ಕಾನೂನು ತೊಡಕನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News