×
Ad

ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್: ಸುಹಾಸ್ ಶತಕ, ಆಶೀಷ್ ಪರ್ಕಳಗೆ 9 ವಿಕೆಟ್; ಮಂಗಳೂರು-ಬೆಂಗಳೂರು ಪಂದ್ಯ ಡ್ರಾ

Update: 2017-12-08 21:58 IST
ಆಶೀಷ್

ಬೆಂಗಳೂರು, ಡಿ.8: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 14 ವರ್ಷ ಕೆಳ ಹರೆಯದವರ ಅಂತರ ವಲಯ ಕ್ರಿಕೆಟ್ ಟೂರ್ನಿಯ ಮಂಗಳೂರು ಮತ್ತು ಬೆಂಗಳೂರು ವಲಯದ ನಡುವೆ ನಡೆದ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ವಲಯ ತಂಡ 89.1 ಓವರು ಗಳಲ್ಲಿ 266 ರನ್‌ಗಳಿಗೆ ಅಲೌಟಾಯಿತು. ಬೆಂಗಳೂರು ತಂಡದ ಸುಹಾಸ್ 15ರ ಮೊತ್ತದಲ್ಲಿ ದೊರೆತ ಜೀವದಾನದ ಲಾಭ ಪಡೆದು ಶತಕ ಬಾರಿಸಿದರು. ವಿಕ್ರಮ್ 64 ರನ್ ಹೊಡೆದರು. ರಾಜ್ಯದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಬಿರುಸಿನ ಆಟವಾಡಿ 39 ರನ್ ಗಳಿಸಿದರು. ಮಂಗಳೂರು ತಂಡದ ಪರವಾಗಿ ಆಶೀಷ್ ನಾಯಕ್ ಪರ್ಕಳ 67ಕ್ಕೆ 4, ಹೃಷಿಕ್ 50ಕ್ಕೆ 3, ಶೇನ್ 42ಕ್ಕೆ 2 ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಮಂಗಳೂರು ತಂಡ ಚೈತನ್ಯ 14ಕ್ಕೆ 5 ಮತ್ತು ವಿಕ್ರಮ್ 9ಕ್ಕೆ 3 ಇವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 57ನೇ ಓವರಿನಲ್ಲಿ 113 ರನ್‌ಗಳಿಗೆ ಆಲೌಟಾಯಿತು. ಹೃಷಿತ್ 32, ಹಾರ್ದಿಕ್ 24 ರನ್ ಗಳಿಸಿದರು.

ಎರಡನೆ ಇನಿಂಗ್ಸ್‌ನಲ್ಲಿ ಆಶೀಷ್ ನಾಯಕ್‌ರ ಸ್ಪಿನ್ ಮೋಡಿಗೆ ಸಿಲುಕಿದ ಬೆಂಗಳೂರು ತಂಡ 42ನೆಯ ಓವರಿನಲ್ಲಿ 92 ರನ್‌ಗಳಿಗೆ 9 ವಿಕೆಟ್ ಕಳೆದು ಕೊಂಡಿದ್ದಾಗ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತು. ಆಶೀಷ್ ನಾಯಕ್ 20 ಓವರುಗಳಲ್ಲಿ 32 ರನ್ ನೀಡಿ 5 ವಿಕೆಟ್ ಪಡೆದರು. ಇದರಿಂದ ಅವರು ಪಂದ್ಯದಲ್ಲಿ 9 ವಿಕೆಟ್ ಗಳಿಸಿ ಸಾಧನೆ ಮಾಡಿದರು.

ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಬೆಂಗಳೂರು ತಂಡ 3 ಅಂಕ ಗಳಿಸಿದರೆ ಮಂಗಳೂರು ವಲಯ ಒಂದು ಅಂಕಕ್ಕೆ ತೃಪ್ತಿ ಪಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News