ಬ್ರಿಟನ್, ಐರೋಪ್ಯ ಒಕ್ಕೂಟ ನಡುವೆ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದ

Update: 2017-12-08 17:09 GMT

ಬ್ರಸೆಲ್ಸ್ (ಬೆಲ್ಜಿಯಂ), ಡಿ. 8: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರುವುದಕ್ಕೆ (ಬ್ರೆಕ್ಸಿಟ್) ಸಂಬಂಧಿಸಿ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ಶುಕ್ರವಾರ ಐತಿಹಾಸಿಕ ಒಪ್ಪಂದವೊಂದು ಏರ್ಪಟ್ಟಿದೆ.

ಒಪ್ಪಂದ ಮಾತುಕತೆಯಲ್ಲಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ಮತ್ತು ಐರೋಪ್ಯ ಒಕ್ಕೂಟದ ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್ ಭಾಗವಹಿಸಿದರು.

  ಐರಿಶ್ ಗಡಿ, ಪ್ರತ್ಯೇಕತೆ ಮಸೂದೆ ಮತ್ತು ನಾಗರಿಕ ಹಕ್ಕುಗಳು ಸೇರಿದಂತೆ ಬೇರ್ಪಡಿಕೆ ವಿಷಯಗಳಿಗೆ ಸಂಬಂಧಿಸಿ ಬ್ರಿಟನ್ ಸಾಕಷ್ಟು ಅಭಿವೃದ್ಧಿಯನ್ನು ಸಾಧಿಸಿದೆ ಎಂಬುದಾಗಿ ಐರೋಪ್ಯ ಒಕ್ಕೂಟ ತಿಳಿಸಿದೆ.

ಈ ಒಪ್ಪಂದವು ಡಿಸೆಂಬರ್ 14-15ರಂದು ನಡೆಯಲಿರುವ ಶೃಂಗ ಸಮ್ಮೇಳನದಲ್ಲಿ ಎರಡನೆ ಹಂತದ ಬ್ರೆಕ್ಸಿಟ್ ಮಾತುಕತೆಗಳನ್ನು ಆರಂಭಿಸಲು ಐರೋಪ್ಯ ಒಕ್ಕೂಟ ನಾಯಕರಿಗೆ ಸಹಾಯಕವಾಗಲಿದೆ.

ನಾಲ್ಕು ದಶಕಗಳಿಗೂ ಅಧಿಕ ಅವಧಿ ಐರೋಪ್ಯ ಒಕ್ಕೂಟದ ಸದಸ್ಯ ದೇಶವಾಗಿದ್ದ ಬ್ರಿಟನ್, 2016 ಜೂನ್‌ನಲ್ಲಿ ನಡೆದ ಬ್ರೆಕ್ಸಿಟ್ ಜನಮತಗಣನೆಯಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಬರುವ ಪರವಾಗಿ ಮತ ಹಾಕಿತ್ತು. ಆದರೆ, ಈ ನಿಟ್ಟಿನಲ್ಲಿ ಮಾತುಕತೆಗಳು ನಿಧಾನ ಗತಿಯಲ್ಲಿ ನಡೆದುಕೊಂಡು ಬಂದಿವೆ.

ಬೇರ್ಪಡಿಕೆ ಪರಿಹಾರವಾಗಿ 45ರಿಂದ 55 ಬಿಲಿಯ ಯುರೋ ಮೊತ್ತವನ್ನು ಐರೋಪ್ಯ ಒಕ್ಕೂಟಕ್ಕೆ ಪಾವತಿಸಲು ಹಾಗೂ ಬ್ರೆಕ್ಸಿಟ್ ಬಳಿಕವೂ ಬ್ರಿಟನ್‌ನಲ್ಲಿ ವಾಸಿಸುವ ಸುಮಾರು 30 ಲಕ್ಷ ಯುರೋಪಿಯನ್ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ಒಪ್ಪಂದದಲ್ಲಿ ಬ್ರಿಟನ್ ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News