ಸೂರಿಗಾಗಿ ಹೆತ್ತ ತಾಯಿ ಹೊತ್ತು ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಗ !
ಮಂಗಳೂರು, ಡಿ.8: ಹೆತ್ತ ತಾಯಿಯ ಆಸೆಯನ್ನು ನೆರವೇರಿಸುವ ಸಲುವಾಗಿ ಮಗನೊಬ್ಬ ಕಾಯಿಲೆಯಿಂದ ಬಳಲುತ್ತಿರುವ ತನ್ನ ತಾಯಿಯನ್ನು ತಾಯಿಯನ್ನು ಹೊತ್ತು ತಂದ ಘಟನೆಗೆ ಜಿಲ್ಲಾಧಿಕಾರಿ ಕಚೇರಿ ಸಾಕ್ಷಿಯಾಯಿತು.
ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಗೇರುಕಟ್ಟೆ ನಿವಾಸಿ ಸುಬ್ರಹ್ಮಣ್ಯ ಸ್ವಂತ ಸೂರಿಗಾಗಿ ಸಕ್ಕರೆ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ 72ರ ವಯೋವೃದ್ಧೆ ತಾಯಿಯನ್ನು ಹೊತ್ತುಕೊಂಡೇ ಅಲೆದಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಅವರು ಶುಕ್ರವಾರ ತಾಯಿಯನ್ನು ಹೊತ್ತುಕೊಂಡೇ ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಗೆ ಬಂದಿದ್ದರು. ಡೀಸಿ ಕಚೇರಿ ಮುಂಭಾಗವೇ ಅನಾರೋಗ್ಯ ಪೀಡಿತ ತಾಯಿಯನ್ನು ಮಲಗಿಸಿ ತಮಗೆ ಸೂರು ಒದಗಿಸಬೇಕೆಂದು ಬೇಡಿಕೊಂಡರು.
ಪಾರೆಂಕಿಯ ಬಂಗೇರುಕಟ್ಟೆಯಲ್ಲಿ 2.75 ಸೆಂಟ್ಸ್ ಸ್ವಂತ ಭೂಮಿ ಹೊಂದಿರುವ ಅವರು ಹಕ್ಕುಪತ್ರವನ್ನೂ ಹೊಂದಿದ್ದಾರೆ. ಬಸವ ವಸತಿ ಯೋಜನೆಯಡಿ ಮನೆಗಾಗಿ ಸ್ಥಳೀಯ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರೂ ಮನೆ ನಿರ್ಮಾಣವಾಗಿಲ್ಲ. ಇದಕ್ಕೆ ಕಾರಣ ಆಧಾರ್ ಸಂಖ್ಯೆ ಸಮಸ್ಯೆ. ಇದರಿಂದಾಗಿ ಸುಬ್ರಹ್ಮಣ್ಯ ತಮ್ಮ ತಾಯಿಯೊಂದಿಗೆ ದೇವಸ್ಥಾನ, ಬಸ್ ನಿಲ್ದಾಣವನ್ನೇ ಆಶ್ರಯಿಸಿಕೊಂಡಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಅವರು ಮನೆಯೊದಗಿಸುವ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಸೂಚನೆಯನ್ನೂ ನೀಡಿದ್ದಾರೆ. ಆದರೆ ಪಂಚಾಯತ್ ನಿರ್ಲಕ್ಷ್ಯ ತೋರುತ್ತಿದೆ. ಅನಾರೋಗ್ಯ ಪೀಡಿತ ತಾಯಿಯನ್ನು ಬಿಟ್ಟು ಎಲ್ಲೂ ಹೋಗದ ಸ್ಥಿತಿ ತನ್ನದು. ಅದಕ್ಕಾಗಿ ತಾಯಿಯನ್ನು ಹೊತ್ತುಕೊಂಡೇ ಎಲ್ಲಾ ಕಡೆ ಅಲೆದಾಡುತ್ತಿದ್ದೇನೆ. ಇದೀಗ ನ್ಯಾಯಕ್ಕಾಗಿ ಮತ್ತೊಮ್ಮೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇನೆ ಎಂದು ಸುಬ್ರಹ್ಮಣ್ಯ ಮಾಧ್ಯಮದವರ ಜತೆ ಹೇಳುತ್ತಿದ್ದರೆ, ಮಲಗಿದ್ದ ತಾಯಿ ಸರೋಜಮ್ಮರ ಕಣ್ಣಗಳು ತೇವಗೊಂಡಿದ್ದವು.
ಅಪರ ಜಿಲ್ಲಾಧಿಕಾರಿ ಸ್ಪಂದನೆ
ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಅವರು 12 ಗಂಟೆಯವರೆಗೂ ಅಲ್ಲೇ ಇದ್ದರೂ ಯಾರೂ ಗಮನಿಸಿರಲಿಲ್ಲ. ಬಳಿಕ ಪತ್ರಕರ್ತರು ಅಪರ ಜಿಲ್ಲಾಧಿಕಾರಿ ಕುಮಾರ್ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ ತಕ್ಷಣ ಸ್ಪಂದಿಸಿದ ಅವರು ಮನೆಯೊದಗಿಸುವ ಭರವಸೆ ನೀಡಿದರಲ್ಲದೆ ಸರೋಜಮ್ಮರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.
ಈ ಹಿಂದೆ ಸರೋಜಮ್ಮರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಿದೆ. ಕಚೇರಿಯ ಸಿಬ್ಬಂದಿ ಕಂಪ್ಯೂಟರ್‌ನೊಂದಿಗೆ ಆಸ್ಪತ್ರೆಗೇ ತೆರಳಿ ಆಧಾರ್ ಮಾಡಿಸಲು ನೆರವಾಗಿದ್ದಾರೆ. ಜಿಲ್ಲಾಡಳಿತ ಅತಿ ಕಾಳಜಿಯಿಂದ ಈ ಕೆಲಸ ಮಾಡಿದೆ. ಅವರಿಗೆ ಸ್ವಂತ ಸೂರು ಶೀಘ್ರವೇ ದೊರೆಯಲಿದೆ. ಸ್ಥಳೀಯ ಪಂಚಾಯತ್‌ಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಕುಮಾರ್ ತಿಳಿಸಿದರು.
ಆಧಾರ್ ಇಲ್ಲದ ಕಾರಣದಿಂದಾಗಿ ಈ ಕುಟುಂಬಕ್ಕೆ ಬಸವ ವಸತಿ ಯೋಜನೆಯಡಿ ಮನೆಯೊದಗಿಸಲು ಸಮಸ್ಯೆಯಾಗಿತ್ತು. ಜಿಲ್ಲಾಡಳಿತವೇ ಮುಂದೆ ನಿಂತು ಇವರಿಗೆ ಆಧಾರ್ ಮಾಡಿಸಿಕೊಟ್ಟಿದೆ. ಇದೀಗ ಆಧಾರ್ ಸಂಖ್ಯೆ ದೊರೆತಿದ್ದು, ಶೀಘ್ರದಲ್ಲಿ ಮನೆಯೊದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.