ಗುಜರಾತ್ ಚುನಾವಣೆ; ಇವಿಎಂ ಗೊಂದಲ : ದೂರು ನೀಡಿದ ಕಾಂಗ್ರೆಸ್

Update: 2017-12-09 11:51 GMT

ಅಹ್ಮದಾಬಾದ್,ಡಿ.9 : ಗುಜರಾತ್ ರಾಜ್ಯದಲ್ಲಿ ಇಂದು ವಿಧಾನಸಭಾ ಚುನಾವಣೆಯ ಪ್ರಥಮ ಹಂತದ ಮತದಾನ ನಡೆಯುತ್ತಿದ್ದು ಅಪರಾಹ್ನ 2 ಗಂಟೆಯ ತನಕ ಶೇ 35.52ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷ  ದೂರು ನೀಡಿದಂತೆ ಯಾವುದೇ ಮತ ಯಂತ್ರಗಳು ಮೊಬೈಲ್ ಫೋನ್ ಅಥವಾ ಬ್ಲೂಟೂತ್ ಗೆ ಸಂಪರ್ಕ ಹೊಂದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಬಿ ಸ್ವೈನ್  ಹೇಳಿದ್ದಾರೆ.

ಇದಕ್ಕೂ ಮುಂಚೆ ಚುನಾವಣಾ ಆಯೋಗ ಕಾಂಗ್ರೆಸ್ ದೂರಿನ ಬಗ್ಗೆ ತನಿಖೆಗೆ ಆದೇಶಿಸಿತ್ತಲ್ಲದೆ ಆಯೋಗದ  ತಂಡವೊಂದು ಪೋರಬಂದರಿನ ಠಕ್ಕರ್ ಪ್ಲಾಟ್ ನಲ್ಲಿರುವ ಬೂತ್ ಗೆ ಆಗಮಿಸಿ  ಇವಿಎಂಗಳು ಮೊಬೈಲ್ ಫೋನ್ ಅಥವಾ ಬ್ಲೂ ಟೂತ್ ಜತೆ ಸಂಪರ್ಕ ಹೊಂದಿವೆಯೇ ಎಂದು ತಿಳಿಯುವ ಪ್ರಯತ್ನ ನಡೆಸಿತ್ತು.

ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಕೂಡ ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಾಗಿದೆ ಎಂದಿದ್ದಾರೆ. ಆದರೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇವಿಎಂಗಳನ್ನು ತಿರುಚಲಾಗಿದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದಾರೆ. "ಪ್ರತಿ ಬಾರಿ ಸೋಲಿನ ಭಯವಿರುವಾಗಲೂ ಕಾಂಗ್ರೆಸ್ ಪಕ್ಷದವರು  ಇವಿಎಂಗಳನ್ನು ದೂರಿದ್ದಾರೆ. ಅವರು ಮುಂದಿನ ಲೋಕಸಭಾ ಚುನಾವಣೆಗೆ ಅಂಗಣ ಸಿದ್ಧಪಡಿಸುತ್ತಿದ್ದು ತಮ್ಮ ಸೋಲಿಗೆ ಇವಿಎಂ ಅನ್ನು ಹೊಣೆಯಾಗಿಸುವ ಉದ್ದೇಶ ಹೊಂದಿದ್ದಾರೆ'' ಎಂದು ಸಚಿವರು ಹೇಳಿದ್ದಾರೆ.

►ಸೂರತ್ ನಗರದ ಕತರ್ ಗ್ರಾಂ ಎಂಬಲ್ಲಿ ಮದುಮಗಳೊಬ್ಬಳು ಮದುವೆಗಿಂತ ಮುಂಚೆಯೇ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾಳೆ.
►ಉಪ್ಲೆಟಾ ಎಂಬಲ್ಲಿ 115 ವರ್ಷದ ವೃದ್ಧೆಯೊಬ್ಬರು ಮತ ಚಲಾಯಿಸಿದ್ದಾರೆ.
►ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಅಂತರದಿಂದ ಜಯ ದೊರೆಯಲಿದೆ ಎಂದು ಕೇಂದ್ರ ವಿತ್ತ ಸಚಿವ  ಅರುಣ್ ಜೇಟ್ಲಿ ಭವಿಷ್ಯ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News