×
Ad

ಮಕ್ಕಳು ದೇಶದ ಆಸ್ತಿಯಾಗಬೇಕು: ಸಚಿವ ಯು.ಟಿ.ಖಾದರ್

Update: 2017-12-09 17:45 IST

ಮಂಗಳೂರು, ಡಿ.9: ಮಕ್ಕಳು ದೊಡ್ಡವರಾಗಿ ತಮ್ಮ ಹೆತ್ತವರಿಗೆ ಆಸ್ತಿಯಾದರೆ ಸಾಲದು, ಸಮಾಜ ಮತ್ತು ದೇಶದ ಆಸ್ತಿಯಾಗಬೇಕು. ನಮ್ಮಲ್ಲಿ ಹಕ್ಕುಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದ್ದರೂ, ಜವಾಬ್ದಾರಿ ಬಗ್ಗೆ ಯಾರು ಮಾತನಾಡುತ್ತಿಲ್ಲ. ಮಕ್ಕಳು ಸಹಿತ ಎಲ್ಲರೂ ತಮ್ಮ ಜವಾಬ್ದಾರಿ ನಿರ್ವಹಿಸಿದರೆ, ಹೆಚ್ಚಿನ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣ ಸಂಪನ್ಮೂಲ ಕೇಂದ್ರ, ಚೈಲ್ಡ್‌ಲೈನ್ ನೋಡೆಲ್ ಏಜೆನ್ಸಿ, ದಕ್ಷಿಣ ಕನ್ನಡ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಪಡಿ ಮಂಗಳೂರು ಹಾಗೂ ಚೈಲ್ಡ್‌ಲೈನ್ 1098 ಆಶ್ರಯದಲ್ಲಿ ಮಕ್ಕಳ ಮಾಸೋತ್ಸವ ಅಂಗವಾಗಿ ನಡೆದ ಸಚಿವರು- ಶಾಸಕರೊಂದಿಗೆ ಮಕ್ಕಳ ಸಂವಾದದಲ್ಲಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಹಿಂದಿನ ಮಕ್ಕಳಿಗೆ ಹೋಲಿಸಿದರೆ ಇಂದಿನ ಮಕ್ಕಳು ಶೇ.95ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಾರೆ. ಅಂಕಗಳನ್ನು ಪಡೆಯುವ ಜತೆಗೆ, ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಪಡೆದು, ಸಂಸ್ಕಾರ, ಸಂಸ್ಕೃತಿ ಮೈಗೂಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಬೇಕು. ನಮ್ಮ ಪರಿಸರದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.

ಪ್ರೌಢಶಾಲೆಗಳ ವಿದ್ಯಾರ್ಥಿಗಳ ಜತೆ ಸಚಿವ ಯು.ಟಿ.ಖಾದರ್ ಸಂವಾದ ನಡೆಸಿದರು. ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೂ ಶೂ ಮತ್ತು ಸಮವಸ್ತ್ರ, ಸರಕಾರಿ ಶಾಲೆ ಮಕ್ಕಳಿಗೂ ಸಿಬಿಎಸ್‌ಇ ಮಾದರಿ ಪಠ್ಯ, ಕನ್ನಡ ಶಾಲೆಗಳಿಗೆ ಮೂಲಸೌಲಭ್ಯ, ಕಾಟಿಪಳ್ಳ ಶಾಲೆ ಬಳಿ ಗುಟ್ಕಾ, ಗಾಂಜಾ ವ್ಯವಹಾರ ನಿಯಂತ್ರಣ, ಮಧ್ಯಾಹ್ನಕ್ಕೆ ಕುಚ್ಚಲಕ್ಕಿ ಊಟ ಪೂರೈಕೆ ಮೊದಲಾದ ಬೇಡಿಕೆಗಳನ್ನು ವಿದ್ಯಾರ್ಥಿಗಳು ಮಂಡಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಂಗ ಉಪನಿರ್ದೇಶಕ ವೈ.ಶಿವರಾಮಯ್ಯ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಎ.ಉಸ್ಮಾನ್ ಮಾತನಾಡಿದರು.

ಮೂಡುಬಿದಿರೆ ಎಸ್‌ಐ ದೇಜಪ್ಪ, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧಿಕಾರಿ ಜೇಮ್ಸ್ ಕುಟಿನ್ಹೊ, ರಾಜ್ಯ ಎಸ್‌ಡಿಎಂಸಿ ಸದಸ್ಯ ಎಸ್.ಎಂ.ಅಬೂಬಕರ್, ಪತ್ರಕರ್ತ ರೇಮಂಡ್ ತಾಕೊಡೆ, ಜಿಲ್ಲಾ ಮಾಸೋತ್ಸವ ಸಮಿತಿ ಅಧ್ಯಕ್ಷ ಸದಸ್ಯ ವಿಕ್ರಂ ಕದ್ರಿ, ಉಳ್ಳಾಲ ವಲಯ ೆಟೊಗ್ರಾರ್‌ಗಳ ಸಂಘದ ಕಾರ್ಯದರ್ಶಿ ರಾಜೇಶ್ ಉಳ್ಳಾಲ, ಶಿಕ್ಷಣ ಒಕ್ಕೂಟದ ಅಧ್ಯಕ್ಷೆ ಪ್ರೇಮಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮುನ್ನ ‘ಅಮಾಯಕನ ಹಳ್ಳಿಯ ಅಮಾಯಕರು’ ಎಂಬ ಕಿರು ನಾಟಕ ಪ್ರದರ್ಶಿಸಿದ ಮಣ್ಣಗುಡ್ಡೆ ಪ್ರೌಢಶಾಲೆ ಶಾಲೆ ವಿದ್ಯಾರ್ಥಿಗಳನ್ನು ಸಚಿವ ಯು.ಟಿ.ಖಾದರ್ ಅಭಿನಂದಿಸಿದರು.

ಕಮಲಾ ಗೌಡ ಸ್ವಾಗತಿಸಿದರು. ಅನಂತರಾಮ ಕೇರಳ ಪ್ರಾಸ್ತಾವಿಕ ಮಾತನಾಡಿದರು. ಯೋಗೀಶ್ ಮಲ್ಲಿಮಾಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News