ತಿಂಗಳೊಳಗೆ 5 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಉಡುಪಿ, ಡಿ.9: ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧಿಸಲಿದ್ದು, ಒಂದು ತಿಂಗಳೊಳಗೆ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗುವುದು ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಬಲಾಯಿಪಾದೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಕ್ಷೇತ್ರದಲ್ಲಿ ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಲಾಗುತ್ತಿದ್ದು, ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಖಾತೆ ತೆರೆಯುವುದು ಶತಸಿದ್ಧ. ಒಂದು ಕ್ಷೇತ್ರದಲ್ಲಿ ಮಹಿಳೆಗೂ ಟಿಕೆಟ್ ಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನಾನು ಕೂಡ ಚುನಾವಣೆ ಸ್ಪರ್ಧಿಸುವಂತೆ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದು, ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಜ.9ರಂದು ಮಂಗಳೂರು ನೆಹರೂ ಮೈದಾನದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿರುವರು. ಮುಂದೆ ಜಿಲ್ಲೆಯ ಪ್ರತಿ ಕ್ಷೇತ್ರ ಗಳಲ್ಲಿಯೂ ಸಮಾವೇಶ ನಡೆಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟುವ ನಿಟ್ಟಿನಲ್ಲಿ ಕಳೆದ ಒಂದು ವರ್ಷ ಅವಧಿಯಲ್ಲಿ ಐದು ಕ್ಷೇತ್ರಗಳಲ್ಲಿ ಬೂತ್ ಕಮಿಟಿ ಹಾಗೂ ಪ್ರತಿ ಗ್ರಾಮಗಳಲ್ಲಿ ಸ್ಥಾನೀಯ ಕಮಿಟಿಗಳನ್ನು ರಚಿಸಲಾಗಿದ್ದು, ಎಲ್ಲ ಘಟಕಗಳಿಗೂ ಪದಾಧಿಕಾರಿ ಗಳನ್ನು ನೇಮಿಸಲಾಗಿದೆ ಎಂದರು.
ರಾಜ್ಯದಲ್ಲಿ ಜನರ ಹಿತ ಕಾಪಾಡುವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ವಿಫಲವಾಗಿದ್ದು, ಜನರು ಈ ಪಕ್ಷಗಳಿಂದ ಬೇಸತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರ ಒಲವು ಜೆಡಿಎಸ್ ಪಕ್ಷದ ಮೇಲಿದ್ದು, ಕುಮಾರಸ್ವಾಮಿ ಮುಂದಿನ ಚುನಾಣೆಯಲ್ಲಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗಿ ಮೂಡಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ರವಿ ಶೆಟ್ಟಿ, ಅಬ್ದುಲ್ ಖಾದರ್, ವೇದವಾಸ, ಹುಸೇನ್ ಹೈಕಾಡಿ ಉಪಸ್ಥಿತರಿದ್ದರು.