ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಲಿ: ಅದಮಾರುಶ್ರೀ

Update: 2017-12-09 16:26 GMT

ಉಡುಪಿ, ಡಿ.9: ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಿಸಿಕೊಂಡರೆ, ಮಕ್ಕಳ ನಾಡಿಮಿಡಿತ ಅರಿತು, ಪ್ರತಿಭೆ ಗುರುತಿಸಿ ಜಗತ್ತಿಗೇ ಸಂಶೋಧಕರನ್ನು ನೀಡಲು ಸಾಧ್ಯವಾಗಬಹುದು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಅಡಿಟೋರಿಯಂನಲ್ಲಿ ‘ಶಕ್ತಿ ಮೂಲಗಳ ಸಮಸ್ಯೆ: ಪರ್ಯಾಯ ಆಯ್ಕೆಗಳು’ ವಿಷಯವಾಗಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಗಿಡಗಳ ಎಣ್ಣೆಯಿಂದ ಓಡುವ ವಾಹನ, ಪರಿಸರ ಮಾಲಿನ್ಯ ರಹಿತ ವಾತಾವರಣ ನಿರ್ಮಾಣದ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ. ಋಷಿ, ಮುನಿಗಳು ಸಾವಿರಾರು ವರ್ಷಗಳ ಹಿಂದೆ ಮಾಡಿದ ಆವಿಷ್ಕಾರ ಉಪ್ಪಿನಕಾಯಿ ಹಾಕಿ ಮುಚ್ಚಿಟ್ಟಂತಿದ್ದು ವಿಜ್ಞಾನಿಗಳು ಮಾಧ್ಯಮವಾಗಿ ಮಾಜಕ್ಕೆ ನೀಡಲಾಗುತ್ತಿದೆ ಎಂದರು.

ಬೆಂಗಳೂರಿನ ಐಐಎಸ್‌ಸಿಯ ನಿವೃತ್ತ ಹಿರಿಯ ವಿಜ್ಞಾನಿ ಪ್ರೊ.ಕೆ.ಜೆ.ರಾವ್ ಮಾತನಾಡಿ, ವಿಜ್ಞಾನಕ್ಕೆ ಗೋಚರವಾಗದ ಶಕ್ತಿಯೊಂದಿದೆ. ಐನ್‌ಸ್ಟೀನ್‌ನಂತಹ ವಿಜ್ಞಾನಿಗಳು ಕೂಡ ದೈವೀಶಕ್ತಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಇಂಧನ ಮೂಲಗಳ ಪರಿಸ್ಥಿತಿ ಬದಲಾಗುತ್ತಿದ್ದು,ತರ್ಕದ ಬದಲು ಸ್ಛೂರ್ತಿ, ಪ್ರೇರಣೆಯಿಂದ ಸಂಶೋಧನೆ ಸಾಧ್ಯ. ಪ್ರಪಂಚ ಕೆಟ್ಟಿಲ್ಲ, ಪ್ರಪಂಚವನ್ನು ನಾವು ಕೆಡಿಸುತ್ತಿದ್ದು ಇದನ್ನು ತಡೆಯದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದರು.

ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಪಾಶ್ಚಾತ್ಯ ಅನುಕರಣೆ ಹೆಚ್ಚಿದ್ದು ಸಂಶೋಧನೆಯಲ್ಲಿ ಭಾರತ ಹಿಂದುಳಿದಿದೆ. ಸಂಶೋಧನೆ ವಿದ್ಯಾರ್ಥಿಗಳ ಆದ್ಯತೆಯಾಗಬೇಕು ಎಂದರು. ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಆಡಳಿತ ಮಂಡಳಿಯ ಗೌರವ ಖಜಾಂಚಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು. ಡಾ.ರಾಘವೇಂದ್ರ ಎ. ಸ್ವಾಗತಿಸಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಜಯಲಕ್ಷ್ಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News