ನೇಪಾಳ ಚುನಾವಣೆ: ಎಡ ಮೈತ್ರಿಕೂಟಕ್ಕೆ 26 ಸ್ಥಾನಗಳಲ್ಲಿ ಜಯ

Update: 2017-12-09 16:29 GMT

ಕಠ್ಮಂಡು (ನೇಪಾಳ), ಡಿ. 9: ನೇಪಾಳದಲ್ಲಿ ನಡೆದ ಐತಿಹಾಸಿಕ ಸಂಸದೀಯ ಮತ್ತು ಪ್ರಾಂತೀಯ ಅಸೆಂಬ್ಲಿ ಚುನಾವಣೆಗಳಲ್ಲಿ, ಎಡ ಪಕ್ಷಗಳ ಮೈತ್ರಿಕೂಟ ಘೋಷಣೆಯಾದ 30 ಸಂಸದೀಯ ಸ್ಥಾನಗಳ ಪೈಕಿ ಕನಿಷ್ಠ 26ರಲ್ಲಿ ಗೆದ್ದಿವೆ ಹಾಗೂ ನೇಪಾಳಿ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ವಿಜಯ ಗಳಿಸಿವೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್-ಯೂನಿಫೈಡ್ ಮಾರ್ಕ್ಸಿಸ್ಟ್- ಲೆನಿನಿಸ್ಟ್ (ಸಿಪಿಎನ್-ಯುಎಂಎಲ್) 18 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷ ಸಿಪಿಎನ್ ಮಾವೊಯಿಸ್ಟ್- ಸೆಂಟರ್ 8 ಸ್ಥಾನಗಳಲ್ಲಿ ಯಶಸ್ಸು ಸಾಧಿಸಿದೆ.

ನೇಪಾಳಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದರೆ, ಓರ್ವ ಪಕ್ಷೇತರ ವಿಜಯ ಗಳಿಸಿದ್ದಾರೆ.

ಸಿಪಿಎನ್-ಯುಎಂಎಲ್ 44 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಸಿಪಿಎನ್ ಮಾವೊಯಿಸ್ಟ್ ಸೆಂಟರ್ 18ರಲ್ಲಿ ಮುಂದಿದೆ. ಅದೇ ವೇಳೆ, ನೇಪಾಳಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಚುನಾವಣಾ ಅಧಿಕಾರಿಗಳು ಶನಿವಾರ ತಿಳಿಸಿದರು.

ಸಂಸದೀಯ ಚುನಾವಣೆಯಲ್ಲಿ ಒಟ್ಟು 128 ಕ್ಷೇತ್ರಗಳಲ್ಲಿ 1,663 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಪ್ರಾಂತೀಯ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 256 ಕ್ಷೇತ್ರಗಳಲ್ಲಿ 2,819 ಅಭ್ಯರ್ಥಿಗಳು ಕಣದಲ್ಲಿದ್ದರು.

ಈ ಚುನಾವಣೆಯು ಹಿಮಾಲಯನ್ ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ಸ್ಥಿರತೆಯನ್ನು ತರಬಹುದು ಎಂಬುದಾಗಿ ಭಾವಿಸಲಾಗಿದೆ.

ನೇಪಾಳದ ಕೆಳಮನೆ ಪ್ರತಿನಿಧಿಗಳ ಸದನವು 275 ಸದಸ್ಯರನ್ನು ಹೊಂದಿದೆ. ಈ ಪೈಕಿ 165 ಮಂದಿಯನ್ನು ಚುನಾವಣೆಯ ಮೂಲಕ ಆರಿಸಲಾಗುತ್ತದೆ ಹಾಗೂ ಉಳಿದ 110 ಸದಸ್ಯರನ್ನು ಪ್ರಮಾಣಬದ್ಧ ಪ್ರಾತಿನಿಧ್ಯ ಮೂಲಕ ವ್ಯವಸ್ಥೆಯ ಮೂಲಕ ಆರಿಸಲಾಗುತ್ತದೆ.

ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News