×
Ad

ಪಡುಕರೆ ಬೀಚ್‌ನಲ್ಲಿ ಸ್ಟೇ ಹೋಂ: ಸಚಿವ ಪ್ರಮೋದ್ ಮಧ್ವರಾಜ್

Update: 2017-12-09 22:02 IST

 ಉಡುಪಿ, ಡಿ.9: ಇಲ್ಲಿನ ಪಡುಕರೆ ಬೀಚ್‌ನಲ್ಲಿ ಸ್ಥಳೀಯರ ಸಹಕಾರ ದೊಂದಿಗೆ ಹೋಂ ಸ್ಟೇಗಳನ್ನು ಆರಂಭಿಸುವ ಮೂಲಕ, ಸ್ಥಳೀಯರಿಗೆ ಉದ್ಯೋಗವ ಕಾಶ ಒದಗಿಸುವುದರ ಜೊತೆಗೆ ಆರ್ಥಿಕ ಅಭಿವೃದ್ದಿಗೂ ಅವಕಾಶ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಶನಿವಾರ, ಮಲ್ಪೆ ಸಮೀಪದ ಸುಂದರ ಕಡಲ ಕಿನಾರೆ ಪಡುಕರೆ ಬೀಚ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸುಮಾರು 77 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತಿದ್ದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಕೆಲವು ದೇಶಗಳಲ್ಲಿ ಪ್ರವಾಸೋದ್ಯಮದಿಂದಲೇ ಜನರು ಅಭಿವೃದ್ದಿ ಹೊಂದಿದ್ದಾರೆ. ಪಡುಕರೆಯಲ್ಲಿ ಹೋಂ ಸ್ಟೇ ಆರಂಭಿಸುವ ಮೂಲಕ ಸ್ಥಳಿಯರು ಮೀನುಗಾರಿಕೆಗಿಂತಲೂ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಈ ಪ್ರದೇಶದಲ್ಲಿ ಪ್ರವಾಸೋಧ್ಯಮ ಅಭಿವೃದ್ದಿಗಾಗಿ ಕೈಗೊಳ್ಳುವ ಕಾರ್ಯಕ್ರಮಗಳನ್ನು ವಾಣಿಜ್ಯೀಕರಣಗೊಳಿಸದೇ, ಸ್ಥಳೀಯ ಯುವಜನತೆಗೆ ವ್ಯವಹಾರ ಕೈಗೊಳ್ಳಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪಡುಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಕೇಂದ್ರ ಆರಂಭಿಸಲು ಈಗಾಗಲೇ 2 ಎಕರೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ. ಪಡುಕರೆ ಬೀಚ್‌ನ್ನು ದೇಶದ ಪ್ರಮುಖ ಬೀಚ್ ಆಗಿ ಅಭಿವೃದ್ದಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಮೋದ್ ಹೇಳಿದರು.

ಪಡುತೋನ್ಸೆಯಿಂದ ಉದ್ಯಾವರದವರೆಗೆ ರಸ್ತೆ ನಿರ್ಮಿಸುವ ಮೂಲಕ ಈ ವಲಯವನ್ನು ಸಿಆರ್‌ಝೆಡ್ 2ರ ವಲಯಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಹಕ್ಕುಪತ್ರ ಪಡೆಯುವ ಕುರಿತಂತೆ ಡಿನೋಟೀಸ್ ನೀಡಲು ಸಾದ್ಯವಾಗಲಿದ್ದು, ಸ್ಥಳೀಯರು ರಸ್ತೆ ಅಭಿವೃಧ್ಧಿಗೆ ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದರು.

ಪ್ರಸ್ತುತ 77 ಲಕ್ಷ ರೂ ವೆಚ್ಚದಲ್ಲಿ ಪಡುಕರೆ ಬೀಚ್‌ನಲ್ಲಿ ಮೂಲಭೂತ ಸೌಕರ್ಯಗಳು, ಶೌಚಾಲಯ ನಿರ್ಮಾಣ, ಗಜೇಬೋ ನಿರ್ಮಾಣ, ಗ್ರಾನೈಟ್ ಬೆಂಚ್‌ಗಳ ನಿರ್ಮಾಣ, ಹೊಸ ಮಣ್ಣಿನ ರಸ್ತೆ ಕಾಮಗಾರಿ ಹಾಗೂ ಇಂಟರ್ ಲಾಕ್ ರಸ್ತೆ ಕಾಮಗಾರಿಗೆ ನಡೆಯಲಿದ್ದು, 2018ರ ಜನವರಿ ಒಳಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಇನ್ನೂ ಹೆಚ್ಚಿನ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ರಾಜ್ಯ ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಲಾಗುುದು ಎಂದು ಪ್ರಮೋದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ವಿಜಯ ಕುಂದರ್, ನಾರಾಯಣ ಕುಂದರ್, ಗಣೇಶ್ ನೇರ್ಗಿ, ಕೆಆರ್‌ಐಡಿಎಲ್‌ನ ಕೃಷ್ಣ ಹೆಪ್ಸೂರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಡಿ.ವುಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News