ಎಂ.ಎ.ಪರೀಕ್ಷೆಯಲ್ಲಿ ಬಿಜೆಪಿ,ಆಪ್ ಕುರಿತು ಪ್ರಶ್ನೆ ಕೇಳಿದ ಬನಾರಸ್ ಹಿಂದು ವಿ.ವಿ.

Update: 2017-12-09 17:06 GMT

ವಾರಣಾಸಿ,ಡಿ.9: ಬನಾರಸ್ ಹಿಂದು ವಿವಿಯು ತನ್ನ ಎಂ.ಎ.ರಾಜಕೀಯ ವಿಜ್ಞಾನ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಎರಡು ಆಡಳಿತ ಪಕ್ಷಗಳಾದ ಬಿಜೆಪಿ ಮತ್ತು ಆಪ್ ಕುರಿತು ಪ್ರಶ್ನೆಗಳನ್ನು ಕೇಳುವ ಮೂಲಕ ಸಮಕಾಲೀನ ರಾಜಕೀಯ ಕುರಿತು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚಿದೆ.

ಎಂ.ಎ.ಭಾಗ-1ರ ‘ಭಾರತೀಯ ರಾಜಕೀಯ ವ್ಯವಸ್ಥೆ:ಸೈದ್ಧಾಂತಿಕ ಮತ್ತು ರಚನಾತ್ಮಕ ಮಗ್ಗಲುಗಳು’ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮೇಲೆ ಪ್ರಬಂಧವನ್ನು ಬರೆಯುವಂತೆ ಸೂಚಿಸಲಾಗಿದ್ದು, ಇದಕ್ಕೆ 15 ಅಂಕಗಳನ್ನು ನಿಗದಿಗೊ ಳಿಸಲಾಗಿತ್ತು. ಇದಕ್ಕೆ ಪರ್ಯಾಯವಾಗಿ ‘ಭಾರತದಲ್ಲಿ ಸಮ್ಮಿಶ್ರ ಸರಕಾರದ ಎರಡು ಯುಗಗಳು, ಒಕ್ಕೂಟವಾದದ ಸ್ವರೂಪವನ್ನು ಚರ್ಚಿಸಿ’ ಎಂಬ ಇನ್ನೊಂದು ಪ್ರಶ್ನೆಯ ಆಯ್ಕೆಯನ್ನೂ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಕಿರುಪ್ರಶ್ನೆಗಳ ವಿಭಾಗದಲ್ಲಿ ಆಪ್ ಕುರಿತು ಎರಡು ಅಂಕಗಳ ಪ್ರಶ್ನೆಯೊಂದನ್ನು ಕೇಳಲಾಗಿತ್ತು.

ರಾಜಕೀಯ ಪಕ್ಷಗಳು ಎಂ.ಎ.ಮೊದಲ ವರ್ಷದ ಪಠ್ಯಕ್ರಮದ ಭಾಗಗಳಾಗಿವೆ. ಹೀಗಾಗಿ ಇವೆರಡು ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ಸೇರಿಸಲಾಗಿತ್ತು. ಇದಕ್ಕೆ ಯಾವುದೇ ವಿದ್ಯಾರ್ಥಿಯು ಆಕ್ಷೇಪಿಸಿರಲಿಲ್ಲ ಎಂದು ವಿವಿಯ ರಾಜಕೀಯ ವಿಜ್ಞಾನ ವಿಭಾಗದ ಪ್ರೊ.ಕೌಶಲ ಕಿಶೋರ ಮಿಶ್ರಾ ಹೇಳಿದರು. ಇತರ ಯಾವುದೇ ರಾಜಕೀಯ ಪಕ್ಷದ ಮೇಲೆ ಪ್ರಬಂಧ ಮಾದರಿಯ ಪ್ರಶ್ನೆಯೇಕಿರಲಿಲ್ಲ ಎಂಬ ಪ್ರಶ್ನೆಗೆ ಅವರು, ಅದು ಉದ್ದೇಶಪೂರ್ವಕವಲ್ಲ. ತಾನು ಪ್ರಶ್ನೆಪತ್ರಿಕೆ ರೂಪಿಸುವಾಗ ಬಿಜೆಪಿ ತನ್ನ ತಲೆಯಲ್ಲಿತ್ತು, ಅಷ್ಟೇ ಎಂದು ಉತ್ತರಿಸಿದರು.

ಬಿಜೆಪಿ ಮತ್ತು ಆಪ್ ಕುರಿತ ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಸುಲಭದ್ದಾಗಿದ್ದವು. ಆದರೆ ‘ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಸಾಮಾಜಿಕ ಮತ್ತು ರಾಜಕೀಯ ಚಿಂತನೆ’ ವಿಷಯದ ಪ್ರಶ್ನೆಪತ್ರಿಕೆಯಲ್ಲಿ, “ಆಧುನಿಕ ಜಿಎಸ್‌ಟಿ ಸಂದರ್ಭದಲ್ಲಿ ಚಾಣಕ್ಯನ ಅರ್ಥಶಾಸ್ತ್ರ ಮತ್ತು ಮನುವಿನ ಜಾಗತೀಕರಣದ ಪರಿಕಲ್ಪನೆ” ಕುರಿತ ಪ್ರಶ್ನೆಗಳು ಹೆಚ್ಚಿನ ವಿದ್ಯಾರ್ಥಿಗಳ ತಲೆ ತಿಂದಿದ್ದವು.

ಈ ಪ್ರಶ್ನೆಗಳನ್ನು ಮತ್ತು ವಿಷಯಗಳನ್ನು ಸಮರ್ಥಿಸಿಕೊಂಡ ಮಿಶ್ರಾ, ವಿವಿಯಲ್ಲಿ 1939ರಿಂದಲೂ ಇವುಗಳನ್ನು ಬೋಧಿಸಲಾಗುತ್ತಿದೆ ಎಂದರು.

ಚಾಣಕ್ಯನ ಅರ್ಥಶಾಸ್ತ್ರವು 13 ಹಂತಗಳನ್ನೊಳಗೊಂಡ ಏಕ ತೆರಿಗೆ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ ಎಂದ ಮಿಶ್ರಾ, ಮನುವಿನ ಕುರಿತ ಪ್ರಶ್ನೆಯನ್ನೂ ಸಮರ್ಥಿಸಿಕೊಂಡರು. ಮೊದಲ ಜಾಗತಿಕ ಚಿಂತಕನಾಗಿದ್ದ ಮನು ಋಷಿ ತನ್ನ ‘ಮನುಸ್ಮತಿ ಮೆ ರಾಜತಂತ್ರ’ ಪುಸ್ತಕದಲ್ಲಿ ಇಡೀ ವಿಶ್ವದ ಕುರಿತು ಮಾತನಾಡಿದ್ದಾನೆ ಎಂದರು.

ಆದರೆ ಈ ಪ್ರಶ್ನೆಗಳು ಮತ್ತು ವಿಷಯಗಳು ಚರ್ಚೆಯನ್ನು ಹುಟ್ಟುಹಾಕಿವೆ. ಇದು ಸಮಕಾಲೀನ ಸಂದರ್ಭದಲ್ಲಿ ಪ್ರಾಚೀನ ತತ್ತ್ವಶಾಸ್ತ್ರಗಳನ್ನು ಉತ್ತೇಜಿಸುವ ಕಟ್ಟರ್ ಹಿಂದೂಗಳ ಅಭಿಯಾನದ ಭಾಗವಾಗಿದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.

ಅರ್ಥಶಾಸ್ತ್ರವು ರಾಜರ ಆಡಳಿತಕ್ಕಾಗಿತ್ತು ಮತ್ತು ಜಿಎಸ್‌ಟಿ ಪ್ರಜಾಪ್ರಭುತ್ವದಲ್ಲಿ ಜಾರಿಗೊಂಡಿದೆ ಎಂದು ವಿವಿಯ ರಾಜಕೀಯ ವಿಶ್ಲೇಷಕ ಧನಂಜಯ ತ್ರಿಪಾಠಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News