ಒಂದೇ ವರ್ಷದಲ್ಲಿ 4 ಪಟ್ಟು ಹೆಚ್ಚಿದ ಆಂಧ್ರಪ್ರದೇಶ ಸಿಎಂ ಆಸ್ತಿ ಮೌಲ್ಯ

Update: 2017-12-09 17:11 GMT

ಹೈದರಾಬಾದ್,ಡಿ.9: ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರ ಆಸ್ತಿಯ ನಿವ್ವಳ ಮೌಲ್ಯವು ಒಂದು ವರ್ಷದಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.

ನಾಯ್ಡು ಅವರ ಪುತ್ರ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರು ಶುಕ್ರವಾರ ಕುಟುಂಬದ ಆಸ್ತಿ ವಿವರಗಳನ್ನು ಘೋಷಿಸಿದ್ದು, 2016 ಮಾ.31ರಂದು 67.04 ಲ.ರೂ.ಗಳಷ್ಟಿದ್ದ ಮುಖ್ಯಮಂತ್ರಿಗಳ ಆಸ್ತಿಯ ಮೌಲ್ಯವು ಈ ವರ್ಷದ ಮಾ.31ಕ್ಕೆ 2.53 ಕೋ.ರೂ.ಗೇರಿದೆ.

ಘೋಷಣೆಯಂತೆ ನಾಯ್ಡು ಅವರು ಹೈದರಾಬಾದ್‌ನ ಜ್ಯುಬಿಲಿ ಹಿಲ್‌ನಲ್ಲಿ ನಿರ್ಮಿಸಿರುವ ನೂತನ ನಿವಾಸದ ಮೌಲ್ಯವು 7.76 ಕೋ.ರೂ.ಆಗಿದೆ. ಕಳೆದ ವರ್ಷ ಕಟ್ಟಡವು ನಿರ್ಮಾಣ ಹಂತದಲ್ಲಿದ್ದರಿಂದ ಮೌಲ್ಯವನ್ನು 3.68 ಕೋ.ರೂ.ಎಂದು ತೋರಿಸಲಾಗಿತ್ತು. ಕಳೆದ ವರ್ಷ ಅವರು 3.59 ಲ.ರೂ ಹೊಂದಿದ್ದರೆ ಈ ವರ್ಷ ಅದು 40.03 ಲ.ರೂ.ಗೇರಿದೆ. ಕುಟುಂಬದ ಉದ್ಯಮವಾಗಿರುವ ಹೆರಿಟೇಜ್ ಫುಡ್ಸ್ ಎಲ್ಲ ಸದಸ್ಯರ ಪ್ರಮುಖ ಆದಾಯ ಮೂಲವಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.

ಹೆರಿಟೇಜ್‌ನ ಎಂಡಿಯಾಗಿರುವ, ನಾಯ್ಡು ಅವರ ಪತ್ನಿ ಭುವನೇಶ್ವರಿ ಆಸ್ತಿ ಮೌಲ್ಯ ಕಳೆದ ವರ್ಷ 33.66 ಕೋ.ರೂ.ಇದ್ದರೆ ಈ ವರ್ಷ ಅದು 46.32 ಕೋ.ರೂ.ಗೇರಿದೆ.

ಸ್ವತಃ ಲೋಕೇಶ್ ಅವರ ಆಸ್ತಿ ಮೌಲ್ಯವೂ ಏರಿಕೆಯಾಗಿದೆ. ಕಳೆದ ವರ್ಷ 8.15 ಕೋ.ರೂ.ಇದ್ದ ಅದು ಈ ವರ್ಷ 15.21 ಕೋ.ರೂ.ಗೇರಿದ್ದರೆ, ಅವರ ಪತ್ನಿ ನಾರಾ ಬ್ರಹ್ಮಣಿ ಅವರ ಆಸ್ತಿ ಮೌಲ್ಯ 12.33 ಕೋ.ರೂ.ಗಳಿಂದ 15.01 ಕೋ.ರೂ.ಗೇರಿದೆ.

ನಾಯ್ಡು ಕುಟುಂಬವು ಲೋಕೇಶ್‌ರ ಎರಡರ ಹರೆಯದ ಪುತ್ರ ನಾರಾ ದೇವಾಂಶನ ಆಸ್ತಿಯನ್ನೂ ಘೋಷಿಸಿದೆ. ಈ ಪುಟಾಣಿಯ ಹೆಸರಿನಲ್ಲಿರುವ ಆಸ್ತಿಯ ಮೌಲ್ಯ 11.32 ಕೋ.ರೂ.ಗಳಿಂದ 11.54 ಕೋ.ರೂ.ಗೇರಿದೆ.

ಪ್ರತಿ ವರ್ಷ ತನ್ನ ಆಸ್ತಿಗಳನ್ನು ಘೋಷಿಸಿಕೊಳ್ಳುವುದು ನಾಯ್ಡು ಕುಟುಂಬದ ನೀತಿಯಾಗಿದೆ. ನಮ್ಮ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ದ್ಯೋತಕವಾಗಿ ನಾವು ಕಳೆದ ಏಳು ವರ್ಷಗಳಿಂದಲೂ ಈ ನೀತಿಯನ್ನು ಪಾಲಿಸುತ್ತಿದ್ದೇವೆ ಎಂದು ಲೋಕೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News