10 ಸಾವಿರ ರೂ.ಗಳಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ

Update: 2017-12-09 17:37 GMT

ಬೆಂಗಳೂರು,ಡಿ.9: ಭಾರತದಲ್ಲಿ ಪ್ರತಿ ವರ್ಷ ಸುಮಾರು 10 ಲಕ್ಷ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ, ಆದರೆ ದುಬಾರಿ ವೆಚ್ಚದಿಂದಾಗಿ ಶೇ.10ಕ್ಕೂ ಕಡಿಮೆ ಜನರಿಗೆ ಮಾತ್ರ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

 ಐಐಟಿ ಮುಂಬೈನ ಡಾ.ರೋಹಿತ್ ಶ್ರೀವಾಸ್ತವ ಅವರು ಕ್ಯಾನ್ಸರ್‌ಗೆ ಕೇವಲ 10,000 ರೂ.ಗಳಲ್ಲಿ ಚಿಕಿತ್ಸೆಯನ್ನು ಒದಗಿಸಬಲ್ಲ ನ್ಯಾನೊ ತಂತ್ರಜ್ಞಾನವನ್ನು ರೂಪಿಸಲು ಶ್ರಮಿಸುತ್ತಿದ್ದಾರೆ. ತನ್ನ ಸಂಶೋಧನೆಯನ್ನು ಮುಂದುವರಿಸಲು ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸಲು ಮುಂದಾಗಿರುವ ಅವರು ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದಾರೆ.

ಇಲ್ಲಿಯ ಇಂಡಿಯಾ ನ್ಯಾನೊ-2017 ಸಮ್ಮೇಳನದಲ್ಲಿ ‘ನ್ಯಾನೊ ಮೆಡಿಸಿನ್’ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದ ಶ್ರೀವಾಸ್ತವ, ಪೂರ್ಣವಾಗಿ ಅಭಿವೃದ್ಧಿಗೊಂಡು ಪರೀಕ್ಷೆಗೊಳಪಟ್ಟ ನಂತರ ಈ ನೂತನ ತಂತ್ರಜ್ಞಾನವು ಶಸ್ತ್ರಚಿಕಿತ್ಸೆ ಅಥವಾ ಕಿಮೊಥೆರಪಿ ಇಲ್ಲದೆ ಕ್ಯಾನ್ಸರ್‌ನ್ನು ಗುಣಪಡಿಸುವಲ್ಲಿ ನೆರವಾಗಲಿದೆ ಎಂದು ತಿಳಿಸಿದರು.

ಇದು ಕ್ಯಾನ್ಸರ್ ಚಿಕಿತ್ಸೆಗೆ ಅಭಿವೃದ್ಧಿಗೊಳಿಸಲಾಗುತ್ತಿರುವ ನೂತನ ತಂತ್ರಜ್ಞಾನಗಳ ಲ್ಲೊಂದಾಗಿದ್ದು, ಚಿಕಿತ್ಸಾ ವೆಚ್ಚ ಮತ್ತು ರೋಗಿಯ ಆಸ್ಪತ್ರೆ ವಾಸದ ಅವಧಿಯನ್ನು ಗಣನೀಯವಾಗಿ ತಗ್ಗಿಸುವ ನಿರೀಕ್ಷೆಯಿದೆ ಎಂದ ಅವರು, ಹೆಚ್ಚಿನ ಕ್ಯಾನ್ಸರ್ ರೋಗಿಗಳು ಸೂಕ್ತ ರೋಗನಿಧಾನ ಮತ್ತು ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳನ್ನು ವ್ಯಯಿಸಬೇಕಾಗುತ್ತದೆ. ಸರಾಸರಿ ಈ ವೆಚ್ಚ 3ರಿಂದ 5 ಲ.ರೂ.ಗಳಾಗುತ್ತವೆ ಎಂದು ಹೇಳಿದರು.

ಕ್ಯಾನ್ಸರ್ ನಿರೋಧಕ ಔಷಧಿಗಳನ್ನು ತುಂಬಿದ, ಚಿನ್ನದ ನ್ಯಾನೊ ಕಣಗಳಿಂದ ಲೇಪಿತ ನ್ಯಾನೊ ಶೆಲ್‌ಗಳನ್ನು ಕ್ಯಾನ್ಸರ್ ಕೋಶಗಳಿಗೆ ಗುರಿಯಾಗಿಸಿಕೊಂಡು ‘ನಿಯರ್ ಇಂಟಿಗ್ರೇಟೆಡ್ ಲೈಟ್’ ಬಳಸಿ ಸುಮಾರು 50 ಡಿಗ್ರಿಗಳಷ್ಟು ಬಿಸಿ ಮಾಡಲಾಗುತ್ತದೆ. ಇದರಿಂದಾಗಿ ನ್ಯಾನೊ ಶೆಲ್‌ಗಳು ವಿಭಜನೆಗೊಂಡು ಕ್ಯಾನ್ಸರ್ ಪೀಡಿತ ಜಾಗಕ್ಕೆ ಔಷಧಿಯನ್ನು ಪೂರೈಸುತ್ತವೆ ಎಂದು ತಿಳಿಸಿದ ಶ್ರೀವಾಸ್ತವ, ಮೊದಲ ಹಂತದ ಪ್ರಯೋಗಗಳು ಪೂರ್ಣಗೊಂಡಿದ್ದು, ಎರಡನೇ ಹಂತದ ಪ್ರಯೋಗಗಳಿಗಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದರು.

 ಏಳು ಕೋಟಿ ರೂ.ಸಂಗ್ರಹದ ಗುರಿಯೊಂದಿಗೆ 45 ದಿನಗಳ ಹಿಂದೆ ಆರಂಭಿಸಿದ್ದ ಕ್ರೌಡ್ ಫಂಡಿಂಗ್ ಪೇಜ್‌ನ ಮೂಲಕ ಈವರೆಗೆ 63,000 ರೂ.ಗಳು ಬಂದಿವೆ ಎಂದೂ ಅವರು ತಿಳಿಸಿದರು.

ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡು ನ್ಯಾನೊ ಔಷಧಿಗಳ ಪ್ರಯೋಗವು ಟ್ಯೂಮರ್‌ನ ಗಾತ್ರವನ್ನು ಕಡಿಮೆಯಾಗಿಸುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಒಂದೇ ಕೋಶವನ್ನು ಬಳಸಿ ಬಹು ಔಷಧಿಗಳನ್ನು ಪೂರೈಸುವ ಸಾಧ್ಯತೆಯ ಕುರಿತು ಪ್ರಸಕ್ತ ಸಂಶೋಧನೆಗಳು ನಡೆಯುತ್ತಿವೆ ಎಂದು ಕೊಚ್ಚಿಯ ಸೆಂಟರ್ ಫಾರ್ ನ್ಯಾನೊ ಸೈನ್ಸಸ್‌ನ ಡೀನ್ ಪ್ರೊ.ಶಾಂತಿಕುಮಾರ ವಿ.ನಾಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News