ಭಾರತದ ಸರಿಯಾಗಿ ವರ್ತಿಸಿಲ್ಲ: ಡ್ರೋನ್ ‘ಅತಿಕ್ರಮಣ’ ಘಟನೆ ಬಗ್ಗೆ ಚೀನಾ ಮಾಧ್ಯಮ

Update: 2017-12-09 17:34 GMT

ಬೀಜಿಂಗ್, ಡಿ. 9: ಚೀನಾ ಭೂಪ್ರದೇಶದೊಳಗೆ ‘ಅತಿಕ್ರಮಣ’ ನಡೆಸಿರುವ ಭಾರತೀಯ ಡ್ರೋನ್ ಸಿಕ್ಕಿಂ ಗಡಿಯ ಸಮೀಪದ ಡೋಕಾ ಲಾ ವಲಯದಲ್ಲಿ ಪತನಗೊಂಡಿದೆ ಹಾಗೂ ಇದೇ ಸ್ಥಳದಲ್ಲಿ ಈ ವರ್ಷ ಉಭಯ ದೇಶಗಳ ನಡುವೆ ಸೇನಾ ಬಿಕ್ಕಟ್ಟು ತಲೆದೋರಿತ್ತು ಎಂದು ಚೀನಾದ ಸರಕಾರಿ ಮಾಧ್ಯಮ ಶನಿವಾರ ಹೇಳಿದೆ.

 ಡ್ರೋನ್ ಅತಿಕ್ರಮಣಕ್ಕಾಗಿ ಭಾರತ ಕ್ಷಮೆಯಾಚಿಸಬೇಕು ಎಂದು ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದಿದೆ. ಭಾರತದ ಮೇಲೆ ಇದರ ಪರಿಣಾಮಗಳು ಒಂದು ಡ್ರೋನನ್ನು ಕಳೆದುಕೊಂಡಿರುವುದಕ್ಕಿಂತಲೂ ಹೆಚ್ಚಾಗಬಹುದು ಎಂದು ಅದು ಎಚ್ಚರಿಸಿದೆ.

 ‘‘ಭಾರತ ಮತ್ತು ಚೀನಾ ಸೇನೆಗಳ ನಡುವೆ ಇತ್ತೀಚೆಗೆ ಏರ್ಪಟ್ಟ ಬಿಕ್ಕಟ್ಟಿನ ಸ್ಥಳದಲ್ಲೇ ಅತಿಕ್ರಮಣ ಸಂಭವಿಸಿದೆ. ಮುಂದೆ ಘರ್ಷಣೆಗಳು ಸಂಭವಿಸದಂತೆ ನೋಡಿಕೊಳ್ಳಲು, ಇಂಥ ಸೂಕ್ಷ್ಮ ಸಮಯ ಹಾಗೂ ಸ್ಥಳದಲ್ಲಿ ಇನ್ನೊಂದು ಪಕ್ಷವು ಪ್ರಚೋದನಕಾರಿ ಎಂಬುದಾಗಿ ಭಾವಿಸಬಹುದಾದ ಯಾವುದೇ ಕೃತ್ಯವನ್ನು ನಡೆಸುವುದರಿಂದ ಎರಡೂ ಪಕ್ಷಗಳು ದೂರವಿರಬೇಕಾಗಿತ್ತು’’ ಎಂದು ಸಂಪಾದಕೀಯ ಹೇಳಿದೆ.

‘‘ಆದರೆ, ಭಾರತ ಸರಿಯಾಗಿ ವರ್ತಿಸಲಿಲ್ಲ’’ ಎಂದು ಅದು ಅಭಿಪ್ರಾಯಪಟ್ಟಿದೆ.

ಭಾರತೀಯ ಡ್ರೋನೊಂದು ತನ್ನ ವಾಯುಕ್ಷೇತ್ರವನ್ನು ಉಲ್ಲಂಘಿಸಿ ಗಡಿಯ ತನ್ನ ಭಾಗದಲ್ಲಿ ಪತನಗೊಂಡಿದೆ ಎಂದು ಚೀನಾ ಗುರುವಾರ ಹೇಳಿತ್ತು. ಈ ಬಗ್ಗೆ ಚೀನಾವು ಭಾರತಕ್ಕೆ ಪ್ರತಿಭಟನೆಯನ್ನು ಸಲ್ಲಿಸಿದೆ.

ಅದೇ ವೇಳೆ, ನಿಯಮಿತ ತರಬೇತಿಯಲ್ಲಿ ತೊಡಗಿದ್ದ ಡ್ರೋನ್ ತಾಂತ್ರಿಕ ಸಮಸ್ಯೆಯಿಂದಾಗಿ ನಿಯಂತ್ರಣ ತಪ್ಪಿ ಗಡಿ ದಾಟಿದೆ ಎಂಬುದಾಗಿ ಭಾರತ ಸ್ಪಷ್ಟೀಕರಣ ನೀಡಿದೆ.

‘‘ಅದು ತಾಂತ್ರಿಕ ದೋಷವೇ ಆಗಿದ್ದರೂ, ಅದೇ ತಪ್ಪು ಸ್ಥಳ ಮತ್ತು ತಪ್ಪು ಸಮಯದಲ್ಲಿ ಯಾಕೆ ಸಂಭವಿಸುತ್ತದೆ? ಒಂದು ವೇಳೆ, ಚೀನಾದ ಡ್ರೋನ್ ತಾಂತ್ರಿಕ ದೋಷದಿಂದಾಗಿ ಭಾರತೀಯ ಭೂಭಾಗಕ್ಕೆ ನುಗ್ಗಿದರೆ, ಅದು ಕೇವಲ ಆಕಸ್ಮಿಕ ಎಂಬ ವಿವರಣೆಯನ್ನು ಭಾರತ ಒಪ್ಪುವುದೇ?’’ ಎಂದು ಸಂಪಾದಕೀಯ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News