ತಲಪಾಡಿ: ಎಸ್‌ಡಿಪಿಐಗೆ ಕಾರ್ಯಕರ್ತರ ಸೇರ್ಪಡೆ, ಸಾರ್ವಜನಿಕ ಸಮಾವೇಶ

Update: 2017-12-09 17:35 GMT

ಉಳ್ಳಾಲ, ಡಿ. 9: ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಕೈಜೋಡಿಸಿರುವುದರ ಪರಿಣಾಮ ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು.ಟಿ.ಖಾದರ್ ಅವರು 30,000 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ  ಹನೀಫ್ ಖಾನ್ ಕೊಡಾಜೆ ಹೇಳಿದ್ದಾರೆ.

ಅವರು ಸೋಶಿಯಲ್ ಡೆಮಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತಲಪಾಡಿ ಕೆ.ಸಿ.ನಗರದಲ್ಲಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಭಾಷಣ ನೆರವೇರಿಸಿದರು.

ಭಾಷಣವೊಂದರಲ್ಲಿ ಸಚಿವ ಖಾದರ್ ಅವರು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಎಸ್ ಡಿಪಿಐ ಸ್ಪರ್ಧಿಸದೇ ಇದ್ದಾಗ 4,000 ಮತಗಳ ಅಂತರದಲ್ಲಿ ಜಯಗಳಿಸಿದ್ದೆ, ಆದರೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧಿಸಿದ್ದರೂ 30,000 ಮತಗಳ ಅಂತರದಲ್ಲಿ ಜಯಗಳಿಸಿದ್ದೇನೆ ಅಂದಿದ್ದರು. ಆದರೆ ವಾಸ್ತವವಾಗಿ ಅಷ್ಟೊಂದು ಮತಗಳ ಅಂತರದಲ್ಲಿ ಜಯಗಳಿಸಿದರ ಹಿಂದೆ ಬಿಜೆಪಿ ಅಭ್ಯರ್ಥಿಯ ಆಯ್ಕೆಯಲ್ಲಿಯೂ ಖಾದರ್ ಅವರ ಕೈವಾಡವೇ ಇತ್ತು ಎಂದು ಆರೋಪಿಸಿದ್ದಾರೆ.

ಸ್ವಾತಂತ್ರ್ಯ ನಂತರ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ ವಂಚಿತರು, ಗುಲಾಮರಂತೆ ಹೆದರಿಕೆಯಿಂದಲೇ ಬದುಕುವವರ ಸಂಖ್ಯೆ ಹೆಚ್ಚಿದೆ. ಐದೂವರೆ ಲಕ್ಷ ಮುಸಲ್ಮಾನರು ಕೋಮುಗಲಭೆಯಿಂದ ಸಾವನ್ನಪ್ಪಿದ್ದಾರೆ. ಶೇ.42 ಮಂದಿ ಜೈಲಿನಲ್ಲಿ ಮುಸ್ಲಿಂ ಸಮುದಾಯದವರೇ ಇದ್ದು, ಶೇ. 70 ರಷ್ಟು ಮಂದಿ ಭಿಕ್ಷುಕರಿದ್ದಾರೆ. ಪ್ರವಾದಿಯವರ ಸಂದೇಶ ಪಾಲಿಸದೆ ನಡೆಸಿದ ಜೀವನಶೈಲಿಯಿಂದ ಹಾಗೂ ದೇಶ ಹಾಗೂ ರಾಜ್ಯವನ್ನಾಳಿದ ಪಕ್ಷಗಳು ಮುಸ್ಲಿಂ ಸಮುದಾಯದವರನ್ನು ಬಳಸಿಕೊಂಡ ರೀತಿಯಿಂದ ಇಂತಹ ಸ್ಥಿತಿ ಸಮುದಾಯಕ್ಕೆ ನಿರ್ಮಾಣವಾಗಿದೆ. ಗಾಂಧಿ ಆಶಯದಂತೆ ಉಮ್ಮರ್‌ರಂತಹ ರಾಜಕೀಯ ವ್ಯವಸ್ಥೆ ಜಾರಿಯಾಗಬೇಕಿದ್ದು, ಅದಕ್ಕಾಗಿ ಎಸ್ ಡಿಪಿಐ ಹಮ್ಮಿಕೊಂಡಿರುವ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಎಸ್‌ಡಿಪಿಐ ಮಂಗಳೂರು ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ ವಹಿಸಿದ್ದರು. ಕಾಸರಗೋಡು ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಎನ್.ಯು, ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಎಸ್ ಡಿಟಿಯು ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ, ಪಿಎಫ್ ಐ ಜಿಲ್ಲಾಧ್ಯಕ್ಷ ನವಾರ್ ಉಳ್ಳಾಲ್, ಎಸ್ ಡಿ ಪಿಐ ಜಿಲ್ಲಾ ಪ್ರ.ಕಾ ಅಥಾವುಲ್ಲಾ ಜೋಕಟ್ಟೆ, ಸಜಿಪನಡು ಗ್ರಾ.ಪಂ ಅಧ್ಯಕ್ಷ ನಾಸೀರ್ ಸಜಿಪ, ಎಸ್ ಡಿ ಪಿಐ ಮಂಗಳೂರು ಕ್ಷೇತ್ರ ಪ್ರ.ಕಾ  ಹಾರಿಸ್ ಮಲಾರ್, ಅಬ್ಬಾಸ್ ಎ.ಆರ್, ಇರ್ಷಾದ್ ಅಜ್ಜಿನಡ್ಕ, ಅಬ್ದುಲ್ ಲತೀಫ್ ಕಿನ್ಯ, ಬಶೀರ್ ಅಜ್ಜಿನಡ್ಕ, ಅಕ್ಬರ್ ಅಲಿ, ಫಾರುಕ್ ಕೆ.ಸಿ.ರೋಡ್ ಉಪಸ್ಥಿತರಿದ್ದರು.

ಈ ವೇಳೆ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸಿ ಸ್ವದೇಶಕ್ಕೆ ಮರಳುವಂತೆ ಸಮಾಜಸೇವೆಗೈಯ್ಯುವ ಬಾವಾ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ 175 ಮಂದಿ ಯುವಕರು ಎಸ್ ಡಿ ಪಿಐ ಪಕ್ಷಕ್ಕೆ ಸೇರ್ಪಡೆಗೊಂಡರು. ಹ್ಯಾರೀಸ್ ಮಲಾರ್ ಸ್ವಾಗತಿಸಿದರು. ಕಾರ್ಯದರ್ಶಿ ಇರ್ಷಾದ್ ಅಜ್ಜಿನಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News