ಐಎಸ್‌ಎಫ್ ಪ್ರಯತ್ನ: ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಯುವಕರು ಊರಿಗೆ

Update: 2017-12-09 17:42 GMT

ಬೆಳ್ತಂಗಡಿ, ಡಿ. 9: ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆಂದು ತೆರಳಿ ಉದ್ಯೋಗ ವಂಚಿತರಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ಮೂವರು ಯುವಕರನ್ನು ಇಂಡಿಯನ್ ಸೋಷಿಯಲ್ ಫಾರಂ (ಐಎಸ್‌ಎಫ್) ನವರು ಮುಂದೆ ನಿಂತು ವಿಮಾನ ಟಿಕೇಟು ಕೊಡಿಸಿ ಶನಿವಾರ ಬೆಳಗ್ಗೆ ಊರಿಗೆ ಕರೆತಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಕುತ್ಲೂರು ನಿವಾಸಿ ಸಂತೋಷ್‌ ಕುಮಾರ್, ಕಾಪು ನಿವಾಸಿ ಸಚಿನ್ ಕುಮಾರ್ ಹಾಗೂ ಸುಳ್ಯದ ನಿವಾಸಿ ಅಬ್ದುಲ್ ರಶೀದ್ ಎಂಬವರೇ ವಂಚನೆಗೊಳಗಾಗಿ ಇದೀಗ ಸ್ವ ದೇಶಕ್ಕೆ ಹಿಂತಿರುಗಿರುವ ಯುವಕರಾಗಿದ್ದಾರೆ. 

ಇವರು ಉದ್ಯೋಗ ಅರಸುತ್ತಾ ಏಜೆಂಟರುಗಳ ಮೂಲಕವಾಗಿ ಎಂಟು ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಮೂರು ತಿಂಗಳು ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರೂ ಅವರಿಗೆ ಕಂಪೆನಿಯವರು ವೇತನವನ್ನೇ ನೀಡದೇ ಸತಾಯಿಸುತ್ತಿದ್ದರು, ಇಂತಹ ಸಂದರ್ಭ ಈ ಯುವಕರು ಸ್ಥಳೀಯವಾಗಿ ಪರಿಚಯವಿದ್ದ ಐಎಸ್‌ಎಫ್ ಸಂಘಟನೆಯವರ ನೆರವನ್ನು ಕೋರಿದ್ದಾರೆ, ಅವರು ಕಂಪೆನಿಯವರೊಂದಿಗೆ ಮಾತುಕತೆ ನಡೆಸಿ ವೇತನ ನೀಡುವಂತೆ ಮಾಡಿದ್ದಾರೆ. ಆದರೆ ಬಳಿಕ ಕೆಲಸವೂ ಇಲ್ಲದೆ ತಮ್ಮ ದಾಖಲೆಗಳೂ ಕೈಯಲ್ಲಿಲ್ಲದೆ ಇವರು ಕೆಲ ತಿಂಗಳುಗಳ ಕಾಲ ಸಂಕಷ್ಟದಲ್ಲಿ ಬದುಕನ್ನು ನಡೆಸಬೇಕಾಗಿ ಬಂದಿತ್ತು. ಈ ಸಂದರ್ಭ ನೌಷಾದ್ ಹಾಗೂ ಅವರ ಗೆಳೆಯರು ಇವರ ನೆರವಿಗೆ ಬಂದಿದ್ದರು, ಅಗತ್ಯವಿರುವ ಎಲ್ಲ ಸಹಾಯಗಳನ್ನೂ ಒದಗಿಸಿದರು.

ದ. ಕ ಜಿಲ್ಲೆಯ ಎಸ್‌ಡಿಪಿಐ ಮುಖಂಡರುಗಳು ಅಗತ್ಯ ದಾಖಲೆ ಪತ್ರಗಳನ್ನು ಒದಗಿಸುವಲ್ಲಿ ನೆರವಾಗಿದ್ದರು. ಕೊನೆಗೂ ಐಎಸ್‌ಎಪ್ ನವರೇ ಇವರಿಗೆ ಮೂವರಿಗೂ ವಿಮಾನದ ಟಿಕೇಟನ್ನೂ ಒದಗಿಸಿ ಭಾರತಕ್ಕೆ ಹಿಂತಿರುಗಲು ಅವಕಾಶ ಒದಗಿಸಿದ್ದಾರೆ.

ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಮೂವರನ್ನೂ ದ.ಕ ಜಿಲ್ಲೆಯ ಎಸ್‌ಡಿಪಿಐ ಮುಖಂಡರುಗಳು ಸ್ವಾಗತಿಸಿ, ಮನೆಗೆ ತಲುಪಿಸುವ ಕಾರ್ಯ ಮಾಡಿದರು. ಬೆಳ್ತಂಗಡಿಯ ಎಸ್‌ಡಿಪಿಐ ಮುಖಂಡರುಗಳು ನಾರಾವಿಯ ಸಂತೋಷ್‌ಕುಮಾರ್ ಅವರ ಮನೆಗೆ ತೆರಳಿ ಮನೆಯವರಿಗೆ ದೈರ್ಯ ತುಂಬಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News