ಗ್ರಾಮೀಣ ವಿದ್ಯಾರ್ಥಿಗಳ ಬುದ್ಧಿಮತ್ತೆಯು ಪಟ್ಟಣದ ವಿದ್ಯಾರ್ಥಿಗಳಿಗಿಂತ ಕಡಿಮೆಯಲ್ಲ: ವಿಜ್ಞಾನಿ ಪ್ರೊ.ಎಂ.ಕೃಷ್ಣಸ್ವಾಮಿ
ಪುತ್ತೂರು, ಡಿ. 9: ಗ್ರಾಮೀಣ ವಿದ್ಯಾರ್ಥಿಗಳ ಬುದ್ಧಿಮತ್ತೆಯು ಪಟ್ಟಣದ ವಿದ್ಯಾರ್ಥಿಗಳಿಗಿಂತ ಕಡಿಮೆಯಲ್ಲ. ಸೂಕ್ತ ಸೌಲಭ್ಯ ಮತ್ತು ಸಹಕಾರವನ್ನು ನೀಡಿದರೆ ಅವರೂ ಉನ್ನತ ಮಟ್ಟಕ್ಕೆ ಏರುವುದಕ್ಕೆ ಸಮರ್ಥರಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ವಿಶ್ರಾಂತ ಹಿರಿಯ ವಿಜ್ಞಾನಿ ಪ್ರೊ.ಎಂ.ಕೃಷ್ಣಸ್ವಾಮಿ ಹೇಳಿದರು.
ಅವರು ಶನಿವಾರ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ 2016-17ನೇ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು.
ಸಮಾಜದ ಉನ್ನತಿಗೆ ಬಾಹ್ಯಾಕಾಶ ಸಂಶೋಧನೆಯು ಅನೇಕ ಕೊಡುಗೆಗಳನ್ನು ನೀಡಿದೆ ಮಳೆಯ ಆಗಮನ, ಗಾಳಿಯ ವೇಗ, ಸಮುದ್ರದ ಉಬ್ಬರ ಇಳಿತ ಮುಂತಾದ ವಿಷಯಗಳ ನಿಖರ ಮಾಹಿತಿಯನ್ನು ನೀಡುವುದರ ಮೂಲಕ ಕರಾವಳಿಯ ಭಾಗದ ಜನತೆಗೆ ಸಾಕಷ್ಟು ಉಪಕಾರಿಯಾಗಿದೆ. ಪ್ರಾಕೃತಿಕ ವಿಕೋಪಗಳು, ಹೇರಳವಾಗಿ ಮೀನು ಸಿಗುವ ಜಾಗದ ಮಾಹಿತಿ ಮುಂತಾದ ವಿಷಯಗಳಿಂದ ಮೀನುಗಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಾಗುತ್ತದೆ. ಉಪಗ್ರಹ ಆಧರಿತ ಸೇವೆಗಳ ಮೂಲಕ ಅನೇಕ ಉದ್ಯೋಗಾವಕಾಶಗಳು ಹುಟ್ಟಿಕೊಂಡಿದ್ದು ದೇಶದ ಆರ್ಥಿಕ ಅಭಿವೃದ್ಧಿಗೆ ವ್ಯಾಪಕ ಕೊಡುಗೆಯನ್ನು ನೀಡಿದೆ ಎಂದರು.
ತಾಂತ್ರಿಕ ಸವಲತ್ತುಗಳು ದೇಶದ ಮೂಲೆ ಮೂಲೆಯ ವಿದ್ಯಾರ್ಥಿಗಳಿಗೆ ಮತ್ತು ಜನತೆಗೆ ಸಿಗಬೇಕೆನ್ನುವುದು ಡಾ. ಅಬ್ದುಲ್ ಕಲಾಂ ಅವರ ಆಶಯವಾಗಿತ್ತು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಯು ಕಾರ್ಯನಿರತವಾಗಿದೆ. ಅದಕ್ಕಾಗಿ ಪ್ರತ್ಯೇಕ ವಿಭಾಗವನ್ನೇ ಪ್ರಾರಂಭಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಇಂಜಿನಿಯರಿಂಗ್ ಪದವಿಯು ಪದವೀಧರರ ಜವಾಭ್ದಾರಿಯನ್ನು ಹೆಚ್ಚಿಸಿದೆ. ಹಿರಿಯರು ಕಂಡಂತಹ ಜಗದ್ವಂದ್ಯ ಭಾರತದ ಕನಸನ್ನು ನನಸು ಮಾಡುವತ್ತ ಯುವಜನತೆ ಮನಸ್ಸು ಮಾಡಬೇಕು. ಸಂಶೋಧನೆ ಮತ್ತು ಅಧ್ಯಾಪನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಅದರಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಿಂದ ಪಡೆದುಕೊಂಡ ಕೆಲ ಅಂಶವನ್ನು ಸಮಾಜಕ್ಕೆ ನೀಡುವುದರೊಂದಿಗೆ ಭವ್ಯ ಭಾರತದ ಸತ್ಪ್ರಜೆಗಳಾಗಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ, ಸಂಚಾಲಕ ರಾಧಾಕೃಷ್ಣ ಭಕ್ತ, ಕೋಶಾಧಿಕಾರಿ ಮುರಳೀಧರ ಭಟ್, ಕ್ಯಾಂಪಸ್ ನಿರ್ದೇಶಕ ಪ್ರೊ.ವಿವೇಕ್ ರಂಜನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪದವಿಯನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯವನ್ನು ನೀಡಿ ಗೌರವಿಸಲಾಯಿತು.
ಪ್ರಾಂಶುಪಾಲ ಡಾ. ಎಂ.ಎಸ್.ಗೋವಿಂದೇಗೌಡ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಭಾಸ್ಕರ್ ಕುಲಕರ್ಣಿ ವಂದಿಸಿದರು. ಪ್ರೊ.ಸಂಗೀತಾ.ಬಿ.ಎಲ್ ಮತ್ತು ಪ್ರೊ.ಅವಿನಾಶ್ ಕಾರ್ಯಕ್ರಮ ನಿರ್ವಹಿಸಿದರು.